ಉದಯವಾಹಿನಿ, ಮಂಡ್ಯ: ‘ಬಿರ್ಸಾ ಮುಂಡಾ ಅವರು ಬುಡಕಟ್ಟು ಜನಾಂಗದವರಿಗೆ ಆರಾಧ್ಯ ದೈವವಿದ್ದಂತೆ. ಅವರ ಜನಾಂಗದ ಉಳಿವಿಗಾಗಿ ಹೋರಾಡಿ ಮಡಿದ ಧೀಮಂತ ನಾಯಕ. ಅವರ ದಿಟ್ಟತನವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಧರ್ತಿ ಆಬಾ ಭಗವಾನ್ ಬಿರ್ಸಾಮುಂಡಾರವರ 150ನೇ ಜನ್ಮ ಜಯಂತಿ ಅಂಗವಾಗಿ ‘ಜನ ಜಾತಿಯ ಗೌರವ್ ದಿವಸ’ ಸಮಾರಂಭ ಹಾಗೂ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.ಬಿರ್ಸಾ ಮುಂಡಾ ಅವರ ಜಯಂತಿಯನ್ನು ಪ್ರತಿ ವರ್ಷ ನ.15ರಂದು ಆಚರಿಸಲಾಗುತ್ತದೆ. ಇವರನ್ನು ಭಾರತೀಯ ಇತಿಹಾಸದಲ್ಲಿ ಮಹಾನ್ ವೀರ ಎಂದು ಕರೆಯಲಾಗುತ್ತದೆ. ಬುಡಕಟ್ಟು ಸಮಾಜದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು’ ಎಂದು ಹೇಳಿದರು.
‘ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಬಿರ್ಸಾ ಮುಂಡಾರವರು ಬುಡಕಟ್ಟು ಜನಾಂಗಕ್ಕೆ ನೀಡಿದ ಕೊಡುಗೆ, ಹೋರಾಟ ಮತ್ತು ತ್ಯಾಗವನ್ನು ಗೌರವಿಸುವುದು ಈ ಜಯಂತಿಯ ಉದ್ದೇಶವಾಗಿದೆ’ ಎಂದು ತಿಳಿಸಿದರು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದು ಅಂತಹವರ ಸಾಲಿಗೆ ಬಿರ್ಸಾ ಮುಂಡಾ ಕೂಡ ಸೇರಿದ್ದಾರೆ. ಇವರು 1875ರ ನವೆಂಬರ್ 15ರಂದು ಜಾರ್ಖಂಡ್ ನ ಉಲಿಹಾತು ಎಂಬ ಗ್ರಾಮದಲ್ಲಿ ಜನಿಸಿದರು ಎಂದು ಅವರ ಹುಟ್ಟಿನ ಬಗ್ಗೆ ತಿಳಿಸಿದರು.
