ಉದಯವಾಹಿನಿ, ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಚುನಾವಣೆ ಪ್ರಚಾರ ಹಾಗೂ ಇತರೆ ಚಟುವಟಿಕೆಗಳ ಸಂದರ್ಭದಲ್ಲಿ ಮದ್ಯ ಮಾರಾಟ ಭರ್ಜರಿಯಾಗಿ ನಡೆದಿದೆ. ಮದ್ಯದ ಅಂಗಡಿಗಳಲ್ಲಿ ₹ 500 ಮುಖಬೆಲೆಯ ನೋಟುಗಳದ್ದೇ ಹೆಚ್ಚು ಕಾರೋಬಾರು.
ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ನ.1ರಿಂದ ನ. 13ರವರೆಗಿನ ಅಂಕಿ-ಅಂಶಗಳ ಪ್ರಕಾರ, 1.01 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಎರಡೂ ತಾಲ್ಲೂಕಿನಲ್ಲಿರುವ ಮದ್ಯದ ಅಂಗಡಿ, ಬಾರ್‌ಗಳು ಹಾಗೂ ಇತರೆಡೆಗಳಲ್ಲಿ ಮದ್ಯ ಮಾರಾಟ ಜೋರಾಗಿ ನಡೆದಿದೆ.

ಮದ್ಯ ಮಾರಾಟ ನಿಷೇಧದ ಹಿನ್ನೆಲೆಯಲ್ಲಿ ಕೆಲವರು, ಮುಂಗಡವಾಗಿ ಮದ್ಯವನ್ನು ಖರೀದಿಸಿಟ್ಟುಕೊಂಡಿದ್ದಾರೆ. ಮತದಾನ ದಿನವಾದ ಬುಧವಾರ ಹಾಗೂ ಅದಕ್ಕೂ ಮುನ್ನಾ ದಿನವಾದ ಮಂಗಳವಾರ, ಮದ್ಯ ಮಾರಾಟ ಪ್ರಮಾಣ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ಗೊತ್ತಾಗುತ್ತಿದೆ.
‘ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ನ.1ರಿಂದ ನ.13ರ ವರೆಗಿನ ಅವಧಿಯಲ್ಲಿ 11,737 ಮದ್ಯದ ಬಾಕ್ಸ್‌ಗಳು ಮಾರಾಟವಾಗಿವೆ. ಒಂದು ಬಾಕ್ಸ್‌ನಲ್ಲಿ 8 ಲೀಟರ್ 640 ಎಂ.ಎಲ್. ಮದ್ಯವಿರುತ್ತದೆ. ಅದರಂತೆ 11,737 ಬಾಕ್ಸ್‌ಗಳ ಲೆಕ್ಕದಲ್ಲಿ 1.01 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ’ ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳಿವೆ.
‘1.01 ಲಕ್ಷ ಲೀಟರ್ ಪೈಕಿ, 69,845 ಲೀಟರ್ (8,084 ಬಾಕ್ಸ್) ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 31,561 ಲೀಟರ್ (3,653 ಬಾಕ್ಸ್‌ಗಳು) ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಅಲ್ಪಪ್ರಮಾಣದಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಳವಾಗಿದೆ.
‘ಶಿಗ್ಗಾವಿ ಪಕ್ಕದಲ್ಲಿರುವ ಹಾನಗಲ್ ತಾಲ್ಲೂಕಿನಲ್ಲಿ 9,691 ಬಾಕ್ಸ್‌ ಮದ್ಯ ಮಾರಾಟವಾಗಿದೆ. ಹಾವೇರಿ ತಾಲ್ಲೂಕಿನಲ್ಲಿ 13,261 ಬಾಕ್ಸ್ ಮದ್ಯ ಬಿಕರಿಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 5.19 ಲಕ್ಷ ಲೀಟರ್ (60,101 ಬಾಕ್ಸ್) ಮದ್ಯ ಮಾರಾಟವಾಗಿದೆ’ ಎಂದು ಮೂಲಗಳು ಹೇಳಿವೆ.
‘ಕಳೆದ ವರ್ಷ ನ.1ರಿಂದ 13ರವರೆಗಿನ ಅವಧಿಯಲ್ಲಿ ಶಿಗ್ಗಾವಿ ತಾಲ್ಲೂಕಿನಲ್ಲಿ 7,643 ಮದ್ಯದ ಬಾಕ್ಸ್‌ಗಳು ಮಾರಾಟವಾಗಿದ್ದವು. ಸವಣೂರು ತಾಲ್ಲೂಕಿನಲ್ಲಿ 4,142 ಬಾಕ್ಸ್ ಮದ್ಯ ಬಿಕರಿಯಾಗಿದ್ದವು’ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!