ಉದಯವಾಹಿನಿ, ಬೆಂಗಳೂರು,: ಸ್ವಚ್ಛ ಅಬಕಾರಿ ಅಭಿಯಾನದಡಿ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ೨೦ ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ ಕರೆ ನೀಡಿದೆ.ಸುದ್ದಿಗಾರರೊಂದಿಗೆ ಮಾತನಾಡಿ, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗಡೆ, ಅಬಕಾರಿ ಇಲಾಖೆಯನ್ನು ಹಣಕಾಸು ಸಚಿವರೇ ನಿರ್ವಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಬೇಕು. ಪರವಾನಗಿ ಹಾಗೂ ಮರು ನೋಂದಣಿ ಸಂದರ್ಭದಲ್ಲಿ ಲಂಚ ಕೇಳುತ್ತಿರುವ ಅಧಿಕಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಬಕಾರಿ ಕಾಯ್ದೆಯ ಸೆಕ್ಷನ್ ೨೯ ಅನ್ನು ಪರಿಶೀಲಿಸಿ ತಿದ್ದುಪಡಿ ಮಾಡಬೇಕು. ಮದ್ಯದ ಚಿಲ್ಲರೆ ಮಾರಾಟದಲ್ಲಿ ಕನಿಷ್ಠ ೨೦% ಲಾಭಾಂಶವನ್ನು ನೀಡಬೇಕು. ನಕಲಿ ಮದ್ಯ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮದ್ಯದ ಪಾರ್ಸೆಲ್ ಬಗ್ಗೆ ಕಾನೂನು ತಿದ್ದುಪಡಿ ಮಾಡಿ ಅವಕಾಶ ಕಲ್ಪಿಸಬೇಕು ಎಂದಿದ್ದಾರೆ. ಒಂದೆಡೆ ಮದ್ಯದಂಗಡಿ ಮಾಲೀಕರು ಬಂದ್‌ಗೆ ಕರೆ ನೀಡಿದರೆ, ಇನ್ನೊಂದೆಡೆ ನಾವು ಬಂದ್ ಮಾಡುವುದಿಲ್ಲ, ಬೆಂಬಲ ನೀಡುವುದಿಲ್ಲ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ. ೨೦ರಂದು ಕರೆ ನೀಡಿರುವ ಮದ್ಯ ಮಾರಾಟ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
