
ಉದಯವಾಹಿನಿ, ಕಾರಟಗಿ: ಭತ್ತಕ್ಕೆ ಕೊಳವೆ ರೋಗ ಕಾಣಿಸಿಕೊಂಡು ಇಳುವರಿ ಕಸಿದುಕೊಂಡಿದೆ. ಕೊಳವೆ ರೋಗ ಅಧಿಕವಾಗಿ ಕಾಣಿಸಿಕೊಂಡಿದ್ದು, ರೋಗ ನಿಯಂತ್ರಣಕ್ಕೆ ಮಾಡಿದ ಎಲ್ಲ ಯತ್ನಗಳೂ ವಿಫಲಗೊಂಡಿದ್ದರಿಂದ ಬೆಳೆ ಬರುವುದಿಲ್ಲ ಎಂದು ಜಿಗುಪ್ಸೆಗೊಂಡು ರೈತ 9 ಎಕರೆ ಭತ್ತದ ಬೆಳೆ ನಾಶಪಡಿಸಿರುವ ಘಟನೆ ಯರಡೋಣ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಯರಡೋಣ ಭಾಗದಲ್ಲಿ ಕೊಳವೆ ರೋಗ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ರೋಗದಿಂದ ಬೆಳೆಯ ಇಡೀ ಭಾಗ ಬೆಳವಣಿಗೆಯಾಗದೇ ಜೊಳ್ಳು ಆಗುವುದು. ಎಕರೆಯಲ್ಲಿ ಶೇ 60ಕ್ಕೂ ಅಧಿಕ ಪ್ರಮಾಣದಲ್ಲಿ ಕೊಳವೆ ರೋಗ ಕಾಣಿಸಿಕೊಂಡು ರೈತರು ಕಂಗಾಲಾಗುವಂತೆ ಮಾಡಿದೆ. ಹೀಗಾಗಿ ಯರಡೋಣ ಗ್ರಾಮದ ರೈತ ಶರಣಪ್ಪ ತನ್ನ 9 ಎಕರೆ ಬೆಳೆಯನ್ನು ಭಾನುವಾರ ನಾಶಒಡಿಸಿದ್ದಾರೆ.
‘ಕೃಷಿಯ ಸಹವಾಸ ಬೇಡ ಎನ್ನುವ ಪರಿಸ್ಥಿತಿ ತಲೆದೋರಿದ್ದು, ರೈತರ ಸಂಕಷ್ಟಕ್ಕೆ ಜಿಲ್ಲಾಡಳಿತ, ಸರ್ಕಾರ ತಕ್ಷಣವೇ ಸ್ಪಂದಿಸಿ ಶೀಘ್ರ ಹಾಗೂ ಅಧಿಕ ಪ್ರಮಾಣದ ಬೆಳೆಹಾನಿ ಪರಿಹಾರ ವಿತರಿಸಬೇಕು’ ಎಂಬುದು ರೈತರ ಆಗ್ರಹವಾಗಿದೆ.
