ಉದಯವಾಹಿನಿ, ಹೆಬ್ರಿ: ಬೆಂಗಳೂರು ನಗರದ ವಿದ್ಯಾರ್ಥಿಗಳು ಹಳ್ಳಿಗೆ ಬಂದು ಗದ್ದೆ ನಾಟಿ ಮಾಡಿ ಕೃಷಿ ಪಾಠ ಕಲಿತರು. ಜನರ ಮನ ಗೆದ್ದು, ಖುಷಿಯಿಂದ ಸಂಭ್ರಮಿಸಿದರು. ಇಂತಹ ಅಪರೂಪದ ಸನ್ನಿವೇಶ ಭಾನುವಾರ ತಾಲ್ಲೂಕಿನ ವರಂಗ ಮಾತಿಬೆಟ್ಟು ಪೆರ್ಮಾನ್ ಬಾಕ್ಯಾರ್ ಗದ್ದೆಯಲ್ಲಿ ನಡೆಯಿತು.
ಬೆಂಗಳೂರಿನ ಆರ್.ಸಿ ಕಾಲೇಜು, ಮಲ್ಲೇಶ್ವರಂ ಎಂಇಎಸ್ ಕಾಲೇಜು, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರಿನ 18ನೇ ಕ್ರಾಸ್ ಸರ್ಕಾರಿ ಪದವಿಪೂರ್ವ ಕಾಲೇಜು, ಹೆಬ್ಬಾಳದ ಸರ್ಕಾರಿ ಪದವಿ ಕಾಲೇಜು, ಎಂಇಎಸ್ ಕಿಶೋರ ಕೇಂದ್ರ, 13 ಕ್ರಾಸ್ ಸರ್ಕಾರಿ ಕಾಲೇಜು, ಶೇಷಾದ್ರಿಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು, ಬೆಂಗಳೂರು ಆರ್ಟ್ಸ್ ಕಾಲೇಜು, ಕಾಮರ್ಸ್ ಕಾಲೇಜು, ವಿಜ್ಞಾನ ಕಾಲೇಜು, ಜಿಆಫ್ ಜಿಸಿ ಪೀಣ್ಯ, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ಸೇರಿದಂತೆ 15ಕ್ಕೂ ಅಧಿಕ ಕಾಲೇಜು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ 150 ವಿದ್ಯಾರ್ಥಿಗಳು 4 ಎಕ್ರೆ ಗದ್ದೆಯಲ್ಲಿ ಭತ್ತ ನಾಟಿ ಮಾಡಿ ಖುಷಿ ಪಟ್ಟರು.
ತುಳುನಾಡಿನ ಪಾರ್ದನ ಕೇಳಿ ಕೆಸರು ಗದ್ದೆಯಲ್ಲಿ ಆಟವಾಡಿದರು. ಮೊದಲ ಬಾರಿ ತುಳುನಾಡಿನ ಮಣ್ಣಿನಲ್ಲಿ ಕುಣಿದು ಕುಪ್ಪಳಿಸಿದರು. ವಿದ್ಯಾರ್ಥಿಗಳಿಗೆ ತುಳುನಾಡಿನ ಸ್ವಾದಿಷ್ಟ ಭೋಜನ ಏರ್ಪಡಿಸಲಾಗಿತ್ತು. ಹಲಸಿನ ಸೊಳೆಯ ಸುಕ್ಕ, ಪತ್ರೊಡೆ, ಹುರುಳಿ ಚಟ್ನಿ, ಕುಚ್ಚಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ, ಸಾರು ಭೋಜನದಲ್ಲಿತ್ತು.
