ಉದಯವಾಹಿನಿ, ಉಡುಪಿ: ನಕ್ಸಲ್ ನಿಗ್ರಹ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡ ) ಅಂತ್ಯಕ್ರಿಯೆಯನ್ನು, ಹೆಬ್ರಿ ತಾಲ್ಲೂಕಿನ ಕೂಡ್ಲು ಸಮೀಪದಲ್ಲಿರುವ ವಿಕ್ರಂ ಗೌಡರ ಮೂಲ ಮನೆಯಲ್ಲೇ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ವಿಕ್ರಂ ಗೌಡ ತಮ್ಮ ಸುರೇಶ್ ಮತ್ತು ತಂಗಿ ಸುಗಣ ಮಣಿಪಾಲದ ಆಸ್ಪತ್ರೆಗೆ ಭೇಟಿ ನೀಡಿದರು. ಶವಾಗಾರಕ್ಕೆ ಆಗಮಿಸಿದ ಅಳಿಯ, ಸೋದರಿಯ ಕುಟುಂಬಸ್ಥರು ಅಂತ್ಯಸಂಸ್ಕಾರ ಪ್ರಕ್ರಿಯ ಬಗ್ಗೆ ಸಮಾಲೋಚನೆ ನಡೆಸಿದರು. ವಿಕ್ರಂ ಗೌಡ ಮತ್ತು ಇತರೆ ನಕ್ಸಲರು ಗ್ರಾಮಕ್ಕೆ ದಿನಸಿ ತರಲು ಬಂದಿದ್ದರು. ಆಗ ಎಎನ್ಎಫ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿಕ್ರಂ ಗೌಡ ಹತನಾಗಿದ್ದ. ಈ ಕಾರ್ಯಾಚರಣೆಗೆ ಎಎನ್ಎಫ್ ತಂಡ ಮೊದಲೇ ಪ್ಲಾನ್ ಮಾಡಿಕೊಂಡಿತ್ತು ಎನ್ನಲಾಗಿದೆ.
ಹೆಬ್ರಿ ತಾಲೂಕಿನ ಕೂಡ್ಲು ಸಮೀಪದ ತಿಂಗಳೆ ಬಳಿಯ ಮನೆಯಲ್ಲೇ ವಿಕ್ರಂ ಗೌಡ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ. ಸದ್ಯ ಮೂಲ ಮನೆಯಲ್ಲಿ ಯಾರು ವಾಸವಿಲ್ಲ. ಮನೆಯನ್ನು ಕೆಡವಿ ಹೊಸಮನೆ ನಿರ್ಮಾಣ ಮಾಡಲಾಗುತ್ತಿದ್ದು, ಮನೆಯ ಆವರಣದಲ್ಲೇ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಕೂಡ್ಲು ಪರಿಸರದಲ್ಲಿ ವಿಕ್ರಂ ಗೌಡಗೆ ಸೇರಿದ ಒಂದು ಎಕರೆ ಭೂಮಿ ಇದೆ. ಈ ಸ್ವಂತ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಹೋದರ ಸುರೇಶ ಗೌಡ ಹಾಗೂ ಸಹೋದರಿ ಸುಗುಣ ತೀರ್ಮಾನ ಮಾಡಿದ್ದಾರೆ. ನನ್ನ ಅಣ್ಣನನ್ನು ಅನಾಥ ಶವವಾಗಿ ಸುಡುವುದು ಬೇಡ, ಅಣ್ಣನಿಗೆ ಸೇರಿದ ಭೂಮಿ ಇದೆ. ಆ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ವಿಕ್ರಂ ಗೌಡ ಸಹೋದರಿ ಸುಗುಣ ಮಾಹಿತಿ ನೀಡಿದ್ದಾರೆ.
