ಉದಯವಾಹಿನಿ,ಬೆಂಗಳೂರು : ರಫ್ತು ವ್ಯವಹಾರದಲ್ಲಿ ಗಮನಾರ್ಹ ಸಾಧನೆ ಮಾಡಿದ ರಾಜ್ಯದ ವಿವಿಧ ಐಟಿ (ಮಾಹಿತಿ ತಂತ್ರಜ್ಞಾನ) ಕಂಪನಿಗಳಿಗೆ ಬೆಂಗಳೂರು ತಂತ್ರಜ್ಞಾನ ಸಮ್ಮೇಳನದಲ್ಲಿ ಸಾಫ್ಟ್‌ವೇರ್ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಅವರು ಅತ್ಯುತ್ತಮ ಕಾರ್ಯನಿರ್ವಹಣೆಯ ಕಂಪನಿ ಇನ್ಫೋಸಿಸ್‌ಗೆ ಕರ್ನಾಟಕದ ಐಟಿ ರತ್ನ, ಅತ್ಯುತ್ತಮ ಐಟಿ ರಫ್ತು ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ರಾಬರ್ಟ್ ಬಾಷ್, ಇಂಟೆಲ್ ಇತ್ಯಾದಿಗಳಿಗೆ ಎಸ್‌ಟಿಪಿಐ-ಐಟಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ಅಮೆಜಾನ್ ಡೆವಲ್‌ಮೆಂಟ್ ಸೆಂಟರ್, ಜೆ.ಪಿ.ಮಾರ್ಗನ್ ಸರ್ವೀಸಸ್, ಗೋಲ್ಡನ್ ಸ್ಯಾಕ್ಸ್, ಸ್ಯಾಮ್ಸಂಗ್ ಆರ್ ಅಂಡ್ ಡಿ, ಕ್ವಾಲ್ಕಾಂ ಇಂಡಿಯಾ, ಸ್ನೀಡರ್ ಎಲೆಕ್ಟ್ರಿಕ್, ಅಲ್ಟ್ರಾನ್ ಟೆಕ್ ಇಂಡಿಯಾ, ಸ್ಯಾಪ್ ಲ್ಯಾಬ್ಸ್, ವಿಎಂವೇರ್ ಸಾಫ್ಟ್‌ವೇರ್ಸ್, ಆಕ್ಸೆಂಚರ್ ಸೊಲ್ಯೂಷನ್ಸ್ ಪರವಾಗಿ ಸಂಸ್ಥೆಗಳ ಉನ್ನತಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದ್ದಾರೆ.
ನಂತರ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಉದ್ಯಮಿಗಳು ಕೇವಲ ವಾಣಿಜ್ಯ ದೃಷ್ಟಿಯಲ್ಲಿ ಲಾಭವನ್ನು ನೋಡುತ್ತಿಲ್ಲ, ತಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯ ಮೂಲಕ ತಂತ್ರಜ್ಞಾನದ ಭವಿಷ್ಯವನ್ನು ನಿರ್ಧರಿಸುತ್ತಿದ್ದಾರೆ. ಇದರ ಲಾಭ ಅಂತಿಮವಾಗಿ ಸಮಾಜಕ್ಕೆ ಸಿಗಲಿದೆ, ರಾಜ್ಯದಲ್ಲಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಸಿಒಇ- ಐಒಟಿ ಓಪನ್-ಲ್ಯಾಬ್ ಕೂಡ ಪ್ರಾರಂಭವಾಗಿದೆ. ಇದರಡಿಯಲ್ಲಿ ೧೩೦ ನವೀನ ಉದ್ಯಮಗಳನ್ನು ಆಯ್ಕೆ ಮಾಡಲಾಗಿದೆ, ೬೭ ಉದ್ಯಮಗಳು ಈಗಾಗಲೇ ಕೆಲಸ ಆರಂಭಿಸಿವೆ. ಇದು ದೇಶದ ಐಒಟಿ ವಲಯವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
