ಉದಯವಾಹಿನಿ, ಮೈಸೂರು: ಮುಡಾ 50:50 ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಇಂದೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಕೋರ್ಟ್ ನಾಳೆಗೆ ಡೆಡ್ಲೈನ್ ನೀಡಿದ್ದು ಲೋಕಾಯುಕ್ತ ಎಸ್ಪಿ ಉದೇಶ್ ಅವರು ಬೆಂಗಳೂರಿಗೆ ತೆರಳಿ ವರದಿ ಸಲ್ಲಿಸಲಿದ್ದಾರೆ.
ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿರುವ ಲೋಕಾಯುಕ್ತ ಎಸ್ಪಿ ಉದೇಶ್ ಸುಮಾರು 400ಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಕೆ ಮಾಡಲಿದ್ದಾರೆ. ವರದಿಯಲ್ಲಿ ಎ1 ಆರೋಪಿ ಸಿದ್ದರಾಮಯ್ಯ, ಎ2 ಆರೋಪಿ ಬಿ.ಎನ್.ಪಾರ್ವತಿ, ಎ3 ಆರೋಪಿ ಮಲ್ಲಿಕಾರ್ಜುನ ಸ್ವಾಮಿ, ಎ4 ಆರೋಪಿ ದೇವರಾಜು ಅವರ ಸಮಗ್ರ ವಿಚಾರಣಾ ವರದಿ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ, ಕೆಸರೆ ಸರ್ವೆ ನಂಬರ್ 464 ರ 3.16 ಎಕರೆ ಭೂಮಿ ಸರ್ವೆ, ವಿಜಯನಗರದ 14 ಸೈಟ್ಗಳ ಸರ್ವೆ ಕಾರ್ಯ, ಈ ಹಿಂದೆ ಸಚಿವರಾಗಿದ್ದ ಬಚ್ಚೇಗೌಡರ ವಿಚಾರಣಾ ವರದಿ, ಹಿಂದಿನ ಆಯುಕ್ತರಾದ ನಟೇಶ್, ಪಾಲಯ್ಯ ಅವರ ಹೇಳಿಕೆ, ಹಿಂದಿನ ಅಧ್ಯಕ್ಷರಾದ ಧ್ರುವಕುಮಾರ್ ಅವರಿಗೆ ನೀಡಿರುವ ನೋಟೀಸ್ ಉಲ್ಲೇಖ, ಹಿಂದೆ ಮುಡಾದಲ್ಲಿ ಕೆಲಸ ಮಾಡಿರುವ ಅಧಿಕಾರಿಗಳ ವಿಚಾರಣೆ, ಮುಡಾದಲ್ಲಿ ದಾಖಲೆಗಳ ಸಂಗ್ರಹದ ವರದಿ, ದೂರುದಾರ ಹಾಗೂ ಮುಡಾದ ದಾಖಲೆಗಳ ಪರಿಶೀಲನಾ ವರದಿ, ಪರಿಶೀಲನೆ ಬಳಿಕದ ವರದಿಗಳ ಸತ್ಯಾಸತ್ಯತೆ ಶೋಧನಾ ಕಾರ್ಯದ ಮಾಹಿತಿ, ಅಧಿಕಾರಿಗಳು ಈವರಗೆ ನಡೆಸಿರುವ ವಿಚಾರಣೆ, ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.
ನಾಳೆ ಸಿಎಂ ಸಿದ್ದರಾಮಯ್ಯಗೆ ಬಿಗ್ ಡೇ ಆಗಲಿದ್ದು, ಲೋಕಾಯುಕ್ತರು ನೀಡುವ ವರದಿ ಸಿಎಂಗೆ ಪಾಲಿಗೆ ವರವಾಗುತ್ತಾ? ಮುಳುವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ನಾಳೆಯೂ ಕೂಡ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
