ಉದಯವಾಹಿನಿ, ವಿಜಯಪುರ : ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ಒಂದು ವರ್ಷದ ಮಗು ಸಂದೀಪ ಪ್ರಕರಣ ಇದೀಗ ಸುಖಾಂತ್ಯ ಕಂಡಿದ್ದು, ಪೊಲೀಸರು ಮಗು ಕದ್ದ ಆರೋಪಿಯನ್ನು ಪತ್ತೆ ಹಚ್ಚಿ ಮಗುವನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು 24 ಗಂಟೆಗಳಲ್ಲಿಯೇ ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ತನ್ನ ಮಕ್ಕಳೊಂದಿಗೆ ತಾಯಿ ಜೊತೆಗೆ ವಿಜಯಪುರಕ್ಕೆ ಸಂಬಂಧಿಕರ ಮನೆಗೆ ಆಗಮಿಸಿದ್ದಳು. ವಿಜಯಪುರದಲ್ಲಿ ರಾಮೇಶ್ವರಿ ತಾಯಿ ಪದ್ಮಾ ಪವಾರ ಅವರು ಅನಾರೋಗ್ಯಕ್ಕೆ ಇಡಾಗಿದ್ದರು. ತಾಯಿಯ ಸಂರಕ್ಷಣೆಗಾಗಿ ಆಕೆಯ ಪುತ್ರಿ ರಾಮೇಶ್ವರಿ ಆಸ್ಪತ್ರೆಯಲ್ಲಿ ತನ್ನ ಮಕ್ಕಳೊಂದಿಗೆ ಇದ್ದಳು. ತಾಯಿಯ ಕಫ ಪರೀಕ್ಷೆಗಾಗಿ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಳು. ಈ ವೇಳೆಯಲ್ಲಿ ಮಗು ಸಂದೀಪನನ್ನು ಅಪಹರಣ ಮಾಡಲಾಗಿತ್ತು.
ಆಸ್ಪತ್ರೆಯಲ್ಲಿನ ಸಿಸಿ ಕ್ಯಾಮರಾ ಆಧರಿಸಿ ಮಗು ಪತ್ತೆಗೆ ಪೊಲೀಸರು ಮುಂದಾಗಿದ್ದರು. ಭಾನುವಾರ ಅಪರಿಚಿತ ವ್ಯಕ್ತಿ ವಿಜಯಪುರದ ಜಿಲ್ಲಾ ಆಸ್ಪತ್ರೆ ಎದುರು ಮಗುವಿನ ಜೊತೆಗೆ ನಿಂತಿದ್ದ. ಆಗ ಪೊಲೀಸರು ಸಂಶಯಾಸ್ಪದ ರೀತಿಯಲ್ಲಿ ತಿರುಗತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಆತನು ದೇವರ ಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ರವಿ ಹರಿಜನ ಎಂದು ತಿಳಿದು ಬಂದಿದೆ. ಯವ ಉದ್ದೇಶಕ್ಕಾಗಿ ಮಗು ಅಪಹರಣ ಮಾಡಿದ್ದ ಎಂಬುವುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವಿಜಯಪುರ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
