ಉದಯವಾಹಿನಿ, ಕೋಲಾರ: ದಕ್ಷಿಣ ಕಾಶಿ ಎಂದೇ ಖ್ಯಾತಿಯಾದ ನಗರದ ಅಂತರಗಂಗೆಯ ವಿಶ್ವೇಶ್ವರ ಸನ್ನಿಧಿಯಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಪೂಜೆ ನಡೆದಿದ್ದು, ಜಿಲ್ಲೆ, ರಾಜ್ಯ,ಹೊರರಾಜ್ಯಗಳಿಂದ ಬೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಲ್ಲಿನ ಬಸವನ ಬಾಯಿಂದ ಬರುವ ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡು ಪುನೀತರಾದರು.
ಬಜರಂಗದಳ, ವಿಶ್ವಹಿಂದೂಪರಿಷತ್‌ನಿಂದ ಉಚಿತ ಸಾರಿಗೆ ಸೇವೆ ನಗರದ ಬಸ್ ನಿಲ್ದಾಣದ ಸಮೀಪದಿಂದ ವ್ಯವಸ್ಥೆ ಮಾಡಿದ್ದು, ಸಾರಿಗೆ ಸೇವೆಗೆ ಚಾಲನೆ ನೀಡಿದ ಬಜರಂಗದಳ ಮುಖಂಡರಾದ ಬಾಲಾಜಿ, ಬಾಬು, ಅಪ್ಪಿಆನಂದ್ ಮತ್ತಿತರರು ೫೦ ಸಾವಿರಕ್ಕೂ ಹೆಚ್ಚು ಭಕ್ತರು ನಗರದಿಂದ ಅಂತರಗಂಗೆಗೆ ಹೋಗಲು ನೆರವಾದರು.
ಕಲ್ಲಿನ ಬಸವನ ಬಾಯಿಂದ ಬರುವ ನೀರು ಪವಿತ್ರ ಗಂಗಾನದಿಯಿಂದಲೇ ಬರುತ್ತಿದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದ್ದು, ಮುಂಜಾನೆಯ ಚಳಿಯಲ್ಲೂ ಭಕ್ತರು ಅಂತರಗಂಗೆ ಬೆಟ್ಟದತ್ತ ದಾಪುಗಾಲು ಹಾಕಿದ್ದರು.
ನಗರದ ಬಸ್ ನಿಲ್ದಾಣದ ಸಮೀಪ ಭಕ್ತಾಧಿಗಳಿಗೆ ಸುಸ್ವಾಗತ ಕೋರುವ ಬೃಹತ್ ಕಮಾನುಗಳೊಂದಿಗೆ ಇಡೀ ಪ್ರದೇಶ ಕೇಸರೀಮಯವಾಗಿದ್ದು, ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಬಜರಂಗದಳದ ಬೃಹತ್ ಕಮಾನುಗಳು, ಬಂಟಿಂಗ್‌ಗಳು, ಭಗವಧ್ವಜಗಳೊಂದಿಗೆ ಇದೇಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಬೆಟ್ಟದ ತಪ್ಪಲಲ್ಲಿನ ಜಲಕಂಠೇಶ್ವರ ಸನ್ನಿಧಿಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಗೋಕುಲ ಮಿತ್ರಬಳಗ, ಸತ್ಯನಾರಾಯಣ ಜ್ಯುವೆಲರ್‍ಸ್‌ನ ವೆಂಕಟೇಶ್ ಸೇರಿದಂತೆ ವಿವಿಧ ಸಂಘಟನೆಗಳಿಂದ ಉಚಿತ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಇಡೀ ದಿನ ನಡೆಯಿತು.

Leave a Reply

Your email address will not be published. Required fields are marked *

error: Content is protected !!