ಉದಯವಾಹಿನಿ, ಕೊಪ್ಪ: ಕಾಡುಕೋಣ, ಹಂದಿ, ಮಂಗಗಳ ಉಪಟಳ ಮಾತ್ರ ಎದುರಿಸಿದ್ದ ತಾಲ್ಲೂಕಿನ ರೈತರು ಇದೀಗ ಕಾಡಾನೆಯ ಭಯದಲ್ಲಿದ್ದಾರೆ. ಪಟ್ಟಣ ಸಮೀಪದ ನಂದಿಗೋಡು ಪ್ರದೇಶದಲ್ಲಿ ಭತ್ತದ ಗದ್ದೆ ಅಡಿಕೆ ತೋಟಕ್ಕೆ ಕಾಡಾನೆ ನುಗ್ಗಿರುವ ಕುರುಹುಗಳು ಕಂಡು ಬಂದಿದೆ. ಗದ್ದೆಯಲ್ಲಿ ಆನೆ ಹೆಜ್ಜೆ ಮತ್ತು ಲದ್ದಿ ಕಂಡುಬಂದಿದ್ದು, ಬೆಳೆಗಾರರಿಗೆ ಆನೆ ಹಾವಳಿಯಿಂದ ಬೆಳೆನಷ್ಟವಾಗುವ ಆತಂಕ ಎದುರಾಗಿದೆ.
ಕೃಷಿಕ ಶ್ರೀನಿವಾಸ್ ಎಂಬುವರ ಮನೆ ಸಮೀಪದ ಭತ್ತದ ಗದ್ದೆಗೆ ನುಗ್ಗಿದ ಆನೆ, ಭತ್ತದ ತೆನೆಯನ್ನು ತಿಂದು, ಗದ್ದೆಯಲ್ಲಿ ಅಳವಡಿಸಿದ್ದ ಬೆದರು ಬೊಂಬೆಯನ್ನು ಕಿತ್ತೆಸೆದಿದೆ. ಸಮೀಪದ ಅಡಿಕೆ ತೋಟದ ಮೂಲಕ ಹಾದು, ತಾಲ್ಲೂಕು ಕಚೇರಿಯಿಂದ 150 ಮೀಟರ್ ಅಂತರದಲ್ಲಿರುವ ಮಲ್ಪೆ -ಮೊಳಕಾಲೂರು ರಾಜ್ಯ ಹೆದ್ದಾರಿ ದಾಟಿ, ಫೈಯರಿಂಗ್ ಗುಡ್ಡದತ್ತ ಸಾಗಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ.
ಎರಡು ವರ್ಷಗಳ ಹಿಂದೆ ತಾಲ್ಲೂಕಿನ ಗಡಿ ಭಾಗದ ಕಾಫಿ ಎಸ್ಟೇಟ್ ಏರಿಯಾಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು. ಜಯಪುರ ಬಳಿ ಎಸ್ಟೇಟ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಆನೆಯನ್ನು ಸೆರೆ ಹಿಡಿಯಲಾಗಿತ್ತು. ನಂತರ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಡಾನೆ ಓಡಾಟ ವರದಿಯಾಗಿರಲಿಲ್ಲ.
