ಉದಯವಾಹಿನಿ,ಚಿಕ್ಕಮಗಳೂರು: ವೈದ್ಯನೊಬ್ಬ ಆಪರೇಷನ್ ಥಿಯೇಟರ್‌ಗೆ ಕಂಠಪೂರ್ತಿ ಕುಡಿದು ಬಂದು ಶಸ್ತ್ರಚಿಕಿತ್ಸೆ ಮಾಡಲಾಗದೆ ಕುಸಿದು ಬಿದ್ದ ಘಟನೆ ಕಳಸದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಬಳಿಕ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯ ಬಾಲಕೃಷ್ಣ ಎಂಬಾತನನ್ನು ಸಿಬ್ಬಂದಿಗಳು ಆಸ್ಪತ್ರೆಯ ಬೆಡ್​ನಲ್ಲಿ ಮಲಗಿಸಿದ್ದಾರೆ.ಕಳಸ ತಾಲೂಕು ಆಸ್ಪತ್ರೆಯಲ್ಲಿ 9 ಮಂದಿ ಮಹಿಳೆಯರಿಗೆ ಸಂತಾನಹರಣ ಶಕ್ತಿ ಶಸ್ತ್ರಚಿಕಿತ್ಸೆ ನಿಗದಿಪಡಿಸಲಾಗಿತ್ತು. ಈ ಸಂಬಂಧ ಬೆಳಗ್ಗಿನಿಂದಲೇ ಅನಸ್ತೇಷಿಯಾ ಪಡೆದುಕೊಂಡು ಮಹಿಳೆಯರು ಕಾಯುತ್ತಿದ್ದರು. ಆದರೆ ವೈದ್ಯ ಮಾತ್ರ ಕಂಠಪೂರ್ತಿ ಕುಡಿದು ಸರಿಯಾಗಿ ಎದ್ದು ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದಾನೆ.ಮದ್ಯದ ಅಮಲಿನಲ್ಲಿ ಬಂದಿದ್ದ ವೈದ್ಯ ಬಾಲಕೃಷ್ಣ ಸಿಬ್ಬಂದಿಗಳ ಮಾತು ಕೇಳದ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದ. ಆದರೆ ಅದೃಷ್ಟವಶಾತ್ ಅಷ್ಟರಲ್ಲೇ ವೈದ್ಯ ಕುಸಿದು ಬಿದ್ದಿದ್ದಾನೆ. ಬಳಿಕ ವೈದ್ಯನನ್ನು ಸಿಬ್ಬಂದಿ ಪಕ್ಕದ ಬೆಡ್ ಮೇಲೆ ಮಲಗಿಸಿದ್ದಾರೆ. ಬಳಿಕ ಶಸ್ತ್ರಚಿಕಿತ್ಸೆ ರದ್ದು ಮಾಡಲಾಗಿದ್ದು, ಅನಸ್ತೇಷಿಯಾ ಪಡೆದುಕೊಂಡಿದ್ದ ಮಹಿಳೆಯರಿಗೆ ಗ್ಲೂಕೋಸ್ ನೀಡಲಾಗಿದೆ.ಗೌರವಾನ್ವಿತ ಹುದ್ದೆಯಲ್ಲಿರುವ ವೈದ್ಯನೊಬ್ಬ ಕುಡಿದು ಬಂದು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದ ಘಟನೆ ಹೊರಬೀಳುತ್ತಿದ್ದಂತೆ ಮಹಿಳೆಯರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಿಬ್ಬಂದಿಗಳು ವೈದ್ಯನ ತಪ್ಪನ್ನು ಮರೆಮಾಚಲು ಪ್ರಯತ್ನಿಸಿದ್ದು, ಶುಗರ್ ಕಾರಣದಿಂದ ಕುಸಿದು ಬಿದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.ಘಟನೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ಮಹಿಳೆಯರ ಕುಟುಂಬಸ್ಥರು, ತಪ್ಪಿತಸ್ಥ ವೈದ್ಯನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್ ಪ್ರತಿಕ್ರಿಯಿಸಿ, ಕರ್ತವ್ಯದ ವೇಳೆ ವೈದ್ಯರ ಅಶಿಸ್ತಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!