ಉದಯವಾಹಿನಿ, ಹೊಳೆನರಸೀಪುರ: ಕಾರ್ತೀಕ ದೀಪೋತ್ಸವದ ಅಂಗವಾಗಿ ಪಟ್ಟಣದ ದೇವಾಲಯಗಳಲ್ಲಿ ಶನಿವಾರ ರಾತ್ರಿ ಭಕ್ತರು ಸಾವಿರಾರು ದೀಪಗಳನ್ನು ಬೆಳಗಿಸಿ ಭಕ್ತಿ ಸಮರ್ಪಿಸಿದರು. ಕೆಲವು ದೇವಾಲಯಗಳಿಗೆ ಮಹಿಳೆಯರೇ ನೂರಾರು ಮಣ್ಣಿನ ದೀಪಗಳನ್ನು ತಂದು ಬತ್ತಿ, ಎಣ್ಣೆ, ತುಪ್ಪ ಹಾಕಿ ಶ್ರದ್ಧೆಯಿಂದ ದೀಪಗಳನ್ನು ಹಚ್ಚಿದರು. ರಾಘವೇಂದ್ರ ಮಠ, ದೇವಾಂಗ ಬಡಾವಣೆಯ ಚೌಡೇಶ್ವರಿ ದೇವಾಲಯ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇವಾಲಯ, ಶಾರದಾಂಬ ಶಂಕರ ಮಠ, ಬಳೆಗಾರ ಬೀದಿಯ ಶನಿದೇವರ ದೇವಾಲಯ, ಈಡಿಗರ ರಾಮಮಂದಿರ, ಮಡಿವಾಳ ರಾಮಮಂದಿರ, ಶ್ರೀ ಕಾಳಿಕಾಂಬ, ಕೋಟೆ ಮಾರಮ್ಮ ಕೋಟೆ ಯಲ್ಲಮ್ಮ ಮಾವಿನಕೆರೆ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ, ಹಳೇಕೋಟೆಯ ಬೆಟ್ಟದ ರಂಗನಾಥಸ್ವಾಮಿ ದೇವಾಲಯಗಳಲ್ಲಿ ಕಾರ್ತಿಕ ಅಮಾವಾಸ್ಯೆಯ ದೀಪಗಳನ್ನು ಬೆಳಗಿಸಿ, ದೇವರಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು.
ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ಪೂಜಿಸಿ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನೀಡಿದರು. ದೇವಾಲಯಗಳು ದೀಪದ ಬೆಳಕಲ್ಲಿ ಕಂಗೊಳಿಸುತ್ತಿದ್ದವು.
