ಉದಯವಾಹಿನಿ, ಬೆಂಗಳೂರು: ನಗರದಲ್ಲಿ ಕಳೆದ ೨ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಫೆಂಗಲ್ ಚಂಡಮಾರುತ ಅವಾಂತರವನ್ನೆ ಸೃಷ್ಟಿಸಿದೆ.
ನಿರಂತರ ಮಳೆಯಿಂದಾಗಿ ವಿಧಾನಸೌಧದ ಎದುರು ಮರ ನೆಲಕ್ಕುರುಳಿದೆ. ಫುಟ್ಪಾತ್ ಮೇಲೆ ಮರ ಬಿದ್ದಿದ್ದರಿಂದ ಜನರಿಗೆ ಓಡಾಟಕ್ಕೆ ಸಮಸ್ಯೆಯಾಗಿದೆ. ಆದರೆ, ಅದನ್ನು ತೆರವುಗೊಳಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ.
ನಗರವನ್ನು ಸಂಪರ್ಕಿಸುವ ಸರ್ವಿಸ್ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ. ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ.
ಹೊಸೂರು-ಬೆಂಗಳೂರು ಮುಖ್ಯರಸ್ತೆಯ ನೆರಳೂರಲ್ಲಿ ಅರ್ಧದಷ್ಟು ನೀರು ನಿಂತಿದ್ದು ಟ್ರಕ್ ಮುಳುಗಡೆಯಾಗಿದೆ.
ವಾಹನಗಳು ಸಂಚಾರ ಮಾಡಲು ಸಾಧ್ಯ ಆಗದೇ ಪರದಾಡಿವೆ. ಅಂಡರ್ ಪಾಸ್ ಮೂಲಕ ರಸ್ತೆ ದಾಟಲು ಕೂಡ ಸಾಧ್ಯ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯ ಅಂಡರ್ಪಾಸ್ ಮುಂಭಾಗ ನೀರು ತುಂಬಿದೆ.
ನಗರದಲ್ಲಿ ಮೂರು ದಿನಗಳಿಂದ ತುಂತುರು ಮಳೆಯಾದ ಹಿನ್ನೆಲೆಯಲ್ಲಿ ಮಳೆಯ ತೇವ ಹೆಚ್ಚಾಗಿ ವಿದ್ಯಾಪೀಠ ವಾರ್ಡ್‌ನಲ್ಲಿ ಕಾಂಪೌಂಡ್ ಮಣ್ಣು ಕುಸಿದಿದೆ. ಎರಡು ತಿಂಗಳ ಹಿಂದೆ ಮಳೆಗೆ ಪಾರ್ಕ್ ಗೋಡೆ ಕುಸಿದಿತ್ತು. ಮತ್ತೆ ಮೂರು ದಿನಗಳಿಂದ ತುಂತುರು ಮಳೆಯ ಹಿನ್ನೆಲೆ, ಕಾಂಪೌಂಡ್ ಜಾಗದಲ್ಲಿ ಮಣ್ಣು ಕುಸಿತ ಆಗಿದೆ.
