ಉದಯವಾಹಿನಿ, ಕೋಲಾರ: ಲಕ್ಷಾಂತರ ರೂಪಾಯಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ರಾತ್ರೋರಾತ್ರಿ ಕಳವು ಮಾಡಿರುವ ಘಟನೆ ತಾಲೂಕಿನ ನರಸಾಪುರ ಹೋಬಳಿಯ ಮಲ್ಲಸಂದ್ರದಲ್ಲಿ ನಡೆದಿದೆ.
ಮಲ್ಲಸಂದ್ರದ ಬಚ್ಚಣ್ಣರಿಗೆ ಸೇರಿದ ತೋಟದಲ್ಲಿ ಶನಿವಾರ ರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು ೩೦ ಶ್ರೀಗಂಧದ ಮರಗಳನ್ನು ಖದೀಮರು ಕದ್ದೊಯ್ದಿದ್ದಾರೆ. ಮೊದಲಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಂತರ ತೋಟದ ಮೂರ್ನಾಲ್ಕು ಕಡೆ ವಿದ್ಯುತ್ ತಂತಿ ಬೇಲಿ ಕತ್ತರಿಸಿ ಒಳನುಗ್ಗಿದ ಖದೀಮರು ಸಿಕ್ಕಸಿಕ್ಕ ಕಡೆಯೆಲ್ಲಾ ಬೆಲೆಬಾಳುವ ಗಂಧದ ಮರಗಳನ್ನು ಕಡಿದು ಪರಾರಿಯಾಗಿದ್ದಾರೆ. ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ಕಾರದಿಂದ ಅನುಮತಿ ಪಡೆದು ಕಳೆದ ೧೬ ವರ್ಷದ ಹಿಂದೆ ತಮ್ಮ ೩.೧೨ ಎಕರೆ ಜಮೀನಿನಲ್ಲಿ ೧೨೦೦ ಶ್ರೀಗಂಧದ ಗಿಡಗಳನ್ನು ನೆಡಲಾಗಿತ್ತು. ಶ್ರೀಗಂಧ ರಕ್ಷಣೆಗಾಗಿ ವಿದ್ಯುತ್ ತಂತಿ ಬೇಲಿ, ಸಿಸಿಟಿವಿ ಅಳವಡಿಸಿದ್ದರೂ, ಈಗಾಗಲೇ ಮೂರು ಬಾರಿ ಶ್ರೀಗಂಧದ ಮರಗಳು ಕಳ್ಳತನವಾಗಿದೆ. ಸಿಸಿಟಿವಿ ದೃಶ್ಯಾವಳಿ ಸಮೇತ ಈ ಬಗ್ಗೆ ವೇಮಗಲ್ ಪೊಲೀಸರಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಈಗಲೂ ಸಹ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧ ಮರಗಳನ್ನು ಕಡಿದುಕೊಂಡು ಹೋಗಿರುವುದರಿಂದ ತುಂಬಾ ನಷ್ಟವಾಗಿದೆ. ಸರ್ಕಾರ ಕೂಡಲೇ ಪರಿಹಾರ ಕೊಡಬೇಕೆಂದು ರೈತ ಬಚ್ಚಣ್ಣ ಒತ್ತಾಯಿಸಿದರು.

ಮೈಸೂರು ಸ್ಯಾಂಡಲ್ ಸೋಪ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ತೋಟದಲ್ಲಿ ಇರುವ ಗಂಧದ ಮರಗಳನ್ನು ಕಟಾವು ಮಾಡಲು ಮುಂದಾಗಿದ್ದೇವು. ಅದಕ್ಕಾಗಿ ಡಿಎಫ್‌ಒ ಏಡುಕೊಂಡಲುಗೆ ಅರ್ಜಿ ಸಲ್ಲಿಸಿದ್ದೆವು. ಅದರಂತೆ ಅಧಿಕಾರಿಗಳು ತೋಟಕ್ಕೆ ಬಂದು ಶ್ರೀಗಂಧದ ಮರಗಳನ್ನು ವೀಕ್ಷಿಸಿದ್ದರು. ಕಟಾವಿಗೆ ಸಂಬಂಧಿಸಿ ಅನುಮತಿ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಶ್ರೀಗಂಧದ ಮರಗಳು ಕಳ್ಳರ ಪಾಲಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯಿಂದಲೇ ಖದೀಮರಿಗೆ ಮಾಹಿತಿ ಸೋರಿಕೆಯಾಗಿದೆ ಎಂದು ರೈತ ಬಚ್ಚಣ್ಣರ ಮಗ ಜಗದೀಶ್ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!