ಉದಯವಾಹಿನಿ, ರಾಯಚೂರು: ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ನಗರದ ಸಾರ್ವಜನಿಕ ಉದ್ಯಾನದಿಂದ ಮೆರವಣಿಗೆ ಆರಂಭಿಸಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ನಗರಸಭೆ ಕಚೇರಿ ಮಾರ್ಗವಾಗಿ ಟಿಪ್ಪುಸುಲ್ತಾನ್ ಉದ್ಯಾನದ ವರೆಗೆ ಆಗಮಿಸಿದರು.
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭವಾಗಿ 24 ವರ್ಷ ಕಳದಿದೆ. ಲಕ್ಷಾಂತರ ಮಕ್ಕಳಿಗೆ ಹಾಲು, ಶಾಲಾ ಸ್ವಚ್ಛತೆ, ಬಿಸಿಯೂಟ ನೀಡಿ ಮಕ್ಕಳನ್ನು ಶಾಲೆಗೆ ಕರೆತರುವ ಜೊತೆಗೆ ಮಕ್ಕಳ ಪೌಷ್ಟಿಕಾಂಶ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಆದರೆ ಸರ್ಕಾರ ಕನಿಷ್ಠ ವೇತನ ಹಾಗೂ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು. ಉತ್ತರಪ್ರದೇಶ ಮತ್ತು ಪಂಜಾಬ ರಾಜ್ಯ ಹೈಕೋರ್ಟ್ ತೀರ್ಮಾನಿಸಿದಂತೆ ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಠ ಕೂಲಿ ಜಾರಿ ಮಾಡಬೇಕು.
