ಉದಯವಾಹಿನಿ, ಕೈರೋ: ಇರಾನ್​ ಹಿಡಿತಕ್ಕೆ ಒಳಗಾಗಿರುವ ಹಾರ್ಮುಜ್​ ಜಲಮಾರ್ಗವನ್ನು ಮುಕ್ತವಾಗಿಸಲು ಏಳು ದೇಶಗಳು ಯುದ್ಧನೌಕೆಗಳನ್ನು ಕಳುಹಿಸಬೇಕು ಎಂದು ಒತ್ತಾಯಿಸಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವಿಶ್ವದ ಐದನೇ ಒಂದು ಭಾಗದಷ್ಟು ತೈಲ ವ್ಯಾಪಾರವಾಗುವ ಜಲಮಾರ್ಗವನ್ನು ನಿಯಂತ್ರಿಸಲು ಒಕ್ಕೂಟಕ್ಕೆ ಸೇರಲು ಆಡಳಿತವು ಮಾತುಕತೆ ನಡೆಸುತ್ತಿರುವಾಗಲೇ ಟ್ರಂಪ್​ ಈ ರೀತಿ ಹೇಳಿಕೆ ನೀಡಿದ್ದು, ಆ ಏಳು ದೇಶಗಳು ಯಾವವು ಎಂಬುದನ್ನು ಮಾತ್ರ ಅವರು ಉಲ್ಲೇಖಿಸಿಲ್ಲ.

ಫ್ಲೋರಿಡಾದಿಂದ ವಾಷಿಂಗ್ಟನ್​ಗೆ ತೆರಳುವಾಗ ಏರ್​ಫೋರ್ಸ್​ ಒನ್​ ವಿಮಾನದಲ್ಲಿ ಮಾತನಾಡಿದ ಅವರು, ಈ ದೇಶಗಳನ್ನು ತಮ್ಮ ಪ್ರದೇಶಗಳನ್ನು ರಕ್ಷಣೆ ಮಾಡಲು ಮುಂದಾಗಬೇಕು. ಕಾರಣ, ಇದು ಅವರ ಸ್ವಂತ ಪ್ರದೇಶವಾಗಿದೆ. ಈ ಜಲಸಂಧಿಯಲ್ಲಿರುವ ಹಡಗು ಮಾರ್ಗವು ಅಮೆರಿಕಕ್ಕೆ ಅಗತ್ಯವಿಲ್ಲ ಏಕೆಂದರೆ ಅದು ತನ್ನದೇ ಆದ ತೈಲ ಪ್ರವೇಶವನ್ನು ಹೊಂದಿದೆ ಎಂದು ಟ್ರಂಪ್​ ಹೇಳಿದ್ದಾರೆ.

ಈ ಜಲಸಂಧಿ ಮೂಲಕ ಚೀನಾ ಶೇ 90ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಅಮೆರಿಕ ಕಡಿಮೆ ಪ್ರಮಾಣದ ಆಮದನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಚೀನಾ ಈ ಒಕ್ಕೂಟಕ್ಕೆ ಸೇರಲಿದೆಯಾ ಎಂಬ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸಿದ್ದಾರೆ. ಬೇರೆ ದೇಶಗಳ ಸೇನೆಗಳು ನಮ್ಮ ಜೊತೆಗಿದ್ದರೆ ಒಳ್ಳೆಯದು, ಇದು ನಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ನಾವು ಕೆಲಸ ಮಾಡೋಣ ಎಂದರು. ಈ ಹಿಂದೆ ಅವರು ಚೀನಾ, ಫ್ರಾನ್ಸ್​, ಜಪಾನ್​, ದಕ್ಷಿಣ ಕೊರಿಯಾ ಮತ್ತು ಬ್ರಿಟನ್​ಗೆ ಮನವಿ ಮಾಡಿಕೊಂಡಿದ್ದರು.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಬಗ್ಗೆ ಮಾತನಾಡಿದ್ದು, ಈ ಹಿಂದೆ ತಮ್ಮ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಹುಡುಕುತ್ತಾ ಟೆಹ್ರಾನ್ ಅನ್ನು ಹಲವು ದೇಶಗಳು ಸಂಪರ್ಕಿಸಿದ್ದು, ಇದು ನಮ್ಮ ಮಿಲಿಟರಿಯ ನಿರ್ಧಾರಕ್ಕೆ ಬಿಟ್ಟದ್ದಾಗಿದೆ. ಅನೇಕ ದೇಶಗಳಿಗೆ ಈ ಕುರಿತಂತೆ ಅನುಮತಿ ನೀಡಲಾಗಿದೆ ಎಂದಿದ್ದರು.

 

Leave a Reply

Your email address will not be published. Required fields are marked *

error: Content is protected !!