ಉದಯವಾಹಿನಿ, ಬೀದರ್‌: ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ನೀಡಬೇಕು. ಅಲ್ಪಸಂಖ್ಯಾತರ ಸ್ಥಾನಮಾನ ಕೊಡಬೇಕು. ತೆಲಂಗಾಣದಲ್ಲಿ ಇತರೆ ಹಿಂದುಳಿದ ವರ್ಗದವರ (ಒಬಿಸಿ) ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಲಿಂಗಾಯತ ಸಮನ್ವಯ ಸಮಿತಿಯಿಂದ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಾನುವಾರ 24ನೇ ಲಿಂಗಾಯತ ಮಹಾ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ಸೇರಿದಂತೆ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಲಿಂಗಾಯತರು ಹೈದರಾಬಾದ್‌ನ ನಾಂಪಲ್ಲಿ ಸಮೀಪದ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸೇರಿದರು. ಅಲ್ಲಿಂದ ಪ್ರಮುಖ ಮಾರ್ಗಗಳ ಮೂಲಕ ವಿಧಾನಸೌಧದ ವರೆಗೆ ರ್‍ಯಾಲಿ ನಡೆಸಿ, ನಂತರ ಮನವಿ ಪತ್ರ ಸಲ್ಲಿಸಿದರು.ಕೊಡಲೇಬೇಕು, ಕೊಡಲೇಬೇಕು ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಲೇಬೇಕು’ ಎಂದು ಘೋಷಣೆಗಳನ್ನು ಹಾಕುತ್ತ, ಷಟಸ್ಥಲ ಚಿಹ್ನೆ ಹೊಂದಿದ ಕೇಸರಿ ಧ್ವಜ, ಟೋಪಿ ಧರಿಸಿ ಹೆಜ್ಜೆ ಹಾಕಿದರು.
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂದು ತೆಲಂಗಾಣ ಸರ್ಕಾರವು, ಕೇಂದ್ರಕ್ಕೆ ಶಿಫಾರಸು ಮಾಡಬೇಕು. ತೆಲಂಗಾಣ ವಿಧಾನಸೌಧದ ಆವರಣದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ಲಿಂಗಾಯತರಿಗೆ ಸ್ಮಶಾನಭೂಮಿ ಮೀಸಲಿಡಬೇಕು. ಬಸವೇಶ್ವರ ಆರ್ಥಿಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಪ್ರತಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬಸವ ಮಂಟಪ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್‌ ರೆಡ್ಡಿ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ, ಬಸವಕಲ್ಯಾಣ ಅನುಭವ ಮಂಟಪದ ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಬೀದರ್‌ನ ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕೆ, ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಹೈದರಾಬಾದಿನ ಅನಿಮಿಷಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ತೆಲಂಗಾಣ ಬಸವ ದಳದ ಅಧ್ಯಕ್ಷ ಶಂಕ್ರೆಪ್ಪ ಪಾಟೀಲ, ಪ್ರಮುಖರಾದ ರಾಜೇಂದ್ರ ಗಂದಗೆ, ಬಿ.ಜಿ. ಶೆಟಕಾರ, ಬಸವರಾಜ ಬುಳ್ಳಾ, ರಾಜಾಸಿಂಗ್, ಬಿ.ವಿ. ಪಾಟೀಲ ಜಹೀರಾಬಾದ್, ಸುರೇಶ ಶೆಟಕಾರ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!