ಉದಯವಾಹಿನಿ, ಬೆಂಗಳೂರು: ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾಗಿದ್ದು, ಭಾರತದ ಹಿಂದಿನ ಅತಿ ನಿರೀಕ್ಷೆ, ಸವಾಲುಗಳು ಈಗ ಸಾಧನೆಯ ಮೆಟ್ಟಿಲುಗಳಾಗಿವೆ. ಇದೀಗ ಯಾವುದೇ ಚಮತ್ಕಾರ ನಡೆಯುತ್ತಿಲ್ಲ. ಎಲ್ಲವೂ ಫಲಿತಾಂಶವಾಗಿ ಪರಿವರ್ತನೆ ಹೊಂದುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಐಟಿಸಿ ಗಾರ್ಡೇನಿಯಾದಲ್ಲಿ ಸಾಂಸ್ಥಿಕ [ಕಾರ್ಪೋರೆಟ್] ಆಡಳಿತ ವಲಯದಲ್ಲಿ ಐಸಿಎಸ್‌ಐ ಉತ್ಕೃಷ್ಟ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ, ಕಂಪೆನಿ ಸೆಕ್ರೆಟರಿ ವಿಷಯ ಕುರಿತ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ದೇಶ ಒಂದೆರೆಡು ಉದ್ಯಮಿಗಳಿಂದ ನಡೆಯುತ್ತಿಲ್ಲ. ಉತ್ತಮ ಉದ್ಯಮಶೀಲತೆಯಿಂದ ಪ್ರಗತಿಯಾಗುತ್ತಿದೆ ಎಂದರು.
ಮಧುಸೂಧನ್ ಸಾಯಿ ಜಾಗತಿಕ ಮಾನವೀಯ ಅಭಿಯಾನದ ಸಂಸ್ಥಾಪಕರಾದ ಮಧುಸೂಧನ್ ಸಾಯಿ ಮಾತನಾಡಿ, ೧ ರಿಂದ ೧೦ ನೇ ತರಗತಿಯ ೫೬ ಲಕ್ಷ ವಿದ್ಯಾರ್ಥಿಗಳಿಗೆ ಪೌಷ್ಟಿಕಯುಕ್ತ ರಾಗಿ, ತೃಣಧಾನ್ಯಗಳನ್ನೊಳಗೊಂಡ ಆಹಾರ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಐಸಿಎಸ್‌ಐ ಕಾರ್ಯದರ್ಶಿ ಆಶಿಶ್ ಮೋಹನ್ ಮಾತನಾಡಿ, ಸಾಂಸ್ಥಿಕ ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಕಂಪೆನಿಗಳು ಮತ್ತು ವ್ಯಕ್ತಿಗಳನ್ನು ಗುರುತಿಸಲು ನಿವೃತ್ತ ನ್ಯಾಯಮೂರ್ತಿ ಸದಾಶಿವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಐಸಿಎಸ್‌ಐ ಅಧ್ಯಕ್ಷ ಬಿ. ನರಸಿಂಹನ್, ಐಸಿಎಸ್‌ಐ ಮಾಜಿ ಅಧ್ಯಕ್ಷ ಸಿ.ಎಸ್. ಮನೀಶ್ ಗುಪ್ತಾ, ಐಸಿಎಸ್‌ಐ ಕೇಂದ್ರೀಯ ಮಂಡಳಿ ಸದಸ್ಯ ಸಿ.ಎಸ್. ದ್ವಾರಕಾನಾಥ್ ಚೆನ್ನೂರ್ ಮತ್ತಿತರರು ಉಪಸ್ಥಿತರಿದ್ದರು.
