ಉದಯವಾಹಿನಿ, ಬೆಂಗಳೂರು: ಗೋಲ್ಡನ್ ಚಾರಿಯಟ್ (ಸುವರ್ಣ ರಥ) ರೈಲು ಪ್ರವಾಸ ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಐತಿಹಾಸಿಕ ಸ್ಥಳಗಳ ಅನಾವರಣಕ್ಕೆ
ಮುಕುಟ ಪ್ರಾಯವೆನಿಸಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ಯಶವಂತಪುರ ರೈಲು ನಿಲ್ದಾಣದ ಫ್ಲಾಟ್ ಫಾರಂ-6ರಲ್ಲಿ ಪುನರ್ ಪ್ರಾರಂಭಗೊಂಡ ಗೋಲ್ಡನ್ ಚಾರಿಯೇಟ್ ರೈಲು ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2018ರಲ್ಲಿ ಇದು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಅದನ್ನು ಮರುಚಾಲನೆಗೊಳಿಸಲಾಗಿದೆ. ಈ ರೈಲಿನ ಮಾಲೀಕತ್ವವನ್ನು 50% ಭಾರತೀಯ ರೈಲ್ವೆ, 25% ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಹಾಗೂ ಕೆಎಸ್ಟಿಡಿಸಿಯ 25%ರಷ್ಟು ಷೇರು ಹೊಂದಿದೆ ಎಂದು ಹೇಳಿದರು.
18 ಕೋಚ್ಗಳಲ್ಲಿ ಕರ್ನಾಟಕ ಆಳಿದ ರಾಜವಂಶಸ್ಥರಾದ ಕದಂಬ, ಹೊಯ್ಸಳ, ವಿಜಯನಗರ ಚಾಲುಕ್ಯರ ಹೆಸರನ್ನು ಇಡಲಾಗಿದೆ. ಊಟ, ವಸತಿಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಗೋಲ್ಡನ್ ಚಾರಿಯೇಟ್ ಪ್ರವಾಸೋದ್ಯಮ ವಿಶ್ವದ ಪ್ರಸಿದ್ಧ ಪರಂಪರೆಯ ತಾಣಗಳ ಜೊತೆಗೆ ಪಶ್ಚಿಮ ಘಟ್ಟಗಳು, ಪ್ರಾಚೀನ ಕಡಲತೀರಗಳು, ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತದೆ.
ಇದರಿಂದ ರೈಲು ಹೋಟೆಟ್ಗಳು, ಕುಶಲಕರ್ಮಿಗಳು, ಪ್ರವಾಸ ನಿರ್ವಾಹಕರಿಗೆ ಆದಾಯ ಕಲ್ಪಿಸಿದಂತಾಗುತ್ತದೆ. ಈ ವಿಶೇಷ ರೈಲು ಪ್ರವಾಸ ಜಾಗತಿಕ ಮಟ್ಟದಲ್ಲಿ ವಿಶ್ವದ ಏಳು ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಗುರುತಿಸಲಾಗಿದ್ದು, ಹಲವಾರು ಪ್ರಶಸ್ತಿ ಪಡೆದುಕೊಂಡಿದೆ ಎಂದರು.
