ಉದಯವಾಹಿನಿ, ಜಗಳೂರು: ತಾಲ್ಲೂಕಿನ ಮುನ್ನೂರು ಗ್ರಾಮದ ಮುನ್ನೂರೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಭಕ್ತರು ಬಾಳೆಹಣ್ಣು ಪತ್ರ ಹಾಗೂ ಹೂಗಳನ್ನು ರಥದ ಕಳಶಕ್ಕೆ ತೂರಿ ಪುನೀತರಾದರು.ಮಾಗ ನಕ್ಷತ್ರದಲ್ಲಿ ರಾತ್ರಿ ಸಮಯದಲ್ಲಿ ರಥೋತ್ಸವ ನಡೆಯುವುದು ಮುನ್ನೂರೇಶ್ವರ ರಥೋತ್ಸವದ ವಿಶೇಷ.
ಮುಸ್ಕೂರಿನ ಓಕಾರೇಶ್ವರ ಹುಚ್ಚನಾಗಲಿಂಗ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಿಶೇಷ ಪೂಜೆ, ಕೈಂಕರ್ಯಗಳು ನಡೆದವು. ಸಂಜೆ 7 ಗಂಟೆ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕೆಪಿಸಿಸಿ ಎಸ್.ಟಿ ಘಟಕದ ಅಧ್ಯಕ್ಷ ಎಂ.ಡಿ ಕೀರ್ತಿ ಕುಮಾರ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎ.ಎಲ್.ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು. ರಥದ ಮುಕ್ತಿ ಬಾವುಟವನ್ನು ಮುನ್ನೂರು ಗ್ರಾಮದ ತಿಪ್ಪೇಸ್ವಾಮಿ ಅವರು * 4 ಲಕ್ಷಕ್ಕೆ ಬಹಿರಂಗ ಹರಾಜಿನಲ್ಲಿ ಪಡೆದರು. ಕಳೆದ ಬಾರಿ ರಾಜ ಭರಮಲಿಂಗಪ್ಪ ಅವರು ₹ 6.90 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದಿದ್ದರು. ಗ್ರಾಮದಲ್ಲಿ ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತಿದ್ದು, ಶನಿವಾರ ಸಾಮಾಜಿಕ ನಾಟಕದ ಪ್ರದರ್ಶನ ಏರ್ಪಡಿಸಲಾಗಿದೆ.
