ಉದಯವಾಹಿನಿ, ಮಂಗಳೂರು: ಸೈಬರ್ ವಂಚಕರಿಗೆ ಅಕ್ರಮವಾಗಿ ಸಿಮ್ ಕಾರ್ಡ್ ಪೂರೈಸುತ್ತಿದ್ದ ಆರೋಪಿಯನ್ನು ಮಂಗಳೂರಿನ ಸೆನ್ ಕ್ರೈಂ ಬ್ರಾಂಚ್ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಣಾತಲ ವಾಸುದೇವ ರೆಡ್ಡಿ (25) ಎಂದು ಗುರುತಿಸಲಾಗಿದೆ. ಆರೋಪಿ ಸೈಬರ್ ವಂಚಕರಿಗೆ ಭಾರತದಿಂದ ವಿವಿಧ ಕಂಪನಿಗಳ 500ಕ್ಕೂ ಹೆಚ್ಚು ಸಿಮ್ಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಆರೋಪಿ ಕಣಾತಲ ವಾಸುದೇವ ರೆಡ್ಡಿ ಓಡಿಶಾ ಮೂಲದವನು. ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿ ಕಣಾತಲ ವಾಸುದೇವ ರೆಡ್ಡಿ ಸಿಮ್ ಪೂರೈಕೆ ಮಾಹಿತಿ ಮಂಗಳೂರಿನ ಸೆನ್ ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಕಾರ್ಯಪ್ರವತ್ತರಾದ ಪೊಲೀಸರು ಆರೋಪಿ ಕಣಾತಲ ವಾಸುದೇವ ರೆಡ್ಡಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜು ಎಂಬುವನು ಹಣ ವಿನಿಯೋಗಿಸಲು ವಾಟ್ಸಾಪ್ ಮೂಲಕ ನಕಲಿ ಲಿಂಕ್ ಕಳುಹಿಸಿ ಅದರ ಮೂಲಕ ಲಕ್ಷಾಂತರ ರೂ. ದೋಚಿದ್ದನು. ಹೀಗೆ, ಹಂತ ಹಂತವಾಗಿ 10,84,017 ರೂಪಾಯಿ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸೈಬರ್ ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ಬಂಧಿಸಿದ್ದಾರೆ.

ಆರೋಪಿ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ವಿಚಾರಣೆಗೆ ಒಳಪಡಿಸಿದಾಗ ಸಿಮ್ ಮಾರಾಟ ದಂಧೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಕೂಡಲೇ ಪೊಲೀಸರು ಕಣಾತಲ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಆರೋಪಿ ಕಣಾತಲ ದುಬೈಗೆ ತೆರಳು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಇಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದರು. ಇನ್ನುಳಿದ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರಿಂದ ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!