
ಉದಯವಾಹಿನಿ, ನವದೆಹಲಿ: ಗೃಹ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ ನೇಮಕಗೊಂಡ 71,000 ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ ಪತ್ರ ವಿತರಿಸಿದ್ದಾರೆ.
ಉದ್ಯೋಗ ಮೇಳದ ಭಾಗವಾಗಿ ದೇಶದ 41 ಭಾಗಗಳಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗಿಯಾದ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಮಾತನಾಡಿ, 71 ಸಾವಿರ ನೇಮಕಾತಿಗಳಲ್ಲಿ 20,901 (29.21%) ಒಬಿಸಿ ಸಮುದಾಯದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತಿದೆ. 11,355 (15.8%) ಪರಿಶಿಷ್ಟ ಜಾತಿ ಮತ್ತು 6,862 (9.59%) ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ನೇಮಕವಾಗಿದ್ದಾರೆ.
2004ರಿಂದ 2014ಕ್ಕೆ ಹೋಲಿಸಿದರೆ, ಕಳೆದ 10 ವರ್ಷಗಳಲ್ಲಿ ಉದ್ಯೋಗದ ಅಂಕಿಅಂಶಗಳು ಶೇ.60 ರಿಂದ ಶೇ.70 ರಷ್ಟು ಹೆಚ್ಚಾಗಿದೆ. 2004ರಿಂದ 2014ರವರೆಗೆ 7,22,161 ನೇಮಕಾತಿ ನಡೆದಿದೆ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ಸಂಖ್ಯೆ ಸುಮಾರು 11 ಲಕ್ಷಕ್ಕೆ ತಲುಪಿದೆ ಎಂದರು.
