ಉದಯವಾಹಿನಿ, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಶಿವರಾಜಕುಮಾರ ಅವರಿಗೆ ಇಂದು ಅಮೇರಿಕಾದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ತಮಿಳು ನಾಡು ಮೂಲದ ವೈದ್ಯ ಡಾ. ಮುರುಗೇಶನ್ ಮನೋಹರನ್ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ. ಶಿವರಾಜಕುಮಾರ ಅವರು ಪಿತ್ತಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಇದೆ. ಕೆಲವು ತಿಂಗಳುಗಳ ಹಿಂದೆ ಪಿತ್ತಕೋಶದಲ್ಲಿ ಸೋಂಕು ಇರುವುದು ಗೊತ್ತಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆಯುತ್ತಲೇ ಒಂದಿಷ್ಟು ಕೆಲಸಗಳನ್ನು ಮುಗಿಸಿದ್ದರು. ನವೆಂಬರ್ 15ರಂದು ಅವರ ನಿರ್ಮಾಣದ ‘ಭೈರತಿ ರಣಗಲ್’ ಚಿತ್ರವು ಬಿಡುಗಡೆಯಾಯಿತು. ಆ ಚಿತ್ರದ ನಂತರ ಪೂರ್ಣಪ್ರಮಾಣದಲ್ಲಿ ಕೆಲಸಗಳನ್ನು ನಿಲ್ಲಿಸಿ, ಅಮೇರಿಕಾಗೆ ಪ್ರಯಾಣ ಮಾಡಿ ಅಲ್ಲಿ ಆಪರೇಷನ್ ಮಾಡಿಸಿಕೊಳ್ಳುವುದಾಗಿ ಶಿವರಾಜಕುಮಾರ ಕಳೆದ ತಿಂಗಳು ಹೇಳಿದ್ದರು. ಅದರಂತೆ ಡಿ. 18ರಂದು ಶಿವರಾಜಕುಮಾರ ತಮ್ಮ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಜೊತೆಗೆ ಅಮೇರಿಕಾಗೆ ಪ್ರಯಾಣ ಬೆಳೆಸಿದ್ದರು.
ಸದ್ಯ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜಕುಮಾರ್ ಅವರಿಗೆ ಇಂದು ಮಿಯಾಮಿಯ ಶಸ್ತ್ರಚಿಕಿತ್ಸೆ ನಡೆಯಲಿದೆ. ಭಾರತೀಯ ಮೂಲದ ಡಾ. ಮುರುಗೇಶನ್ ಮನೋಹರನ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಅವರ ಆರೋಗ್ಯ ಸ್ಥಿತಿ ಚೆನ್ನಾಗಿದ್ದು, ವೈದ್ಯರು ಸಹ ಸಾಕಷ್ಟು ಧೈರ್ಯ ತುಂಬಿದ್ದಾರೆ ಎಂದು ಹೇಳಲಾಗಿದೆ.
