ಉದಯವಾಹಿನಿ, ಕಡೂರು: ಪಟ್ಟಣದ ಪ್ರಮುಖ ವ್ಯತ್ರವಾದ ಕೆ.ಎಲ್.ವಿ.ವೃತ್ತ ನವೀಕರಣಗೊಳ್ಳುತ್ತಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಗತವೈಭವ ನೆನಪಿಸುತ್ತಿದ್ದ ಈ ವ್ಯತ್ತಕ್ಕೆ ಇದೀಗ ಪುರಸಭೆ ಪುನಶ್ವೇತನ ನೀಡಲು ಮುಂದಾಗಿದೆ. 18 ಲಕ್ಷ ವೆಚ್ಚದಲ್ಲಿ ಕಾರಂಜಿ ಅಳವಡಿಸಲಿದೆ. ಈ ವೃತ್ತದ ಪುನಶ್ವೇತನಕ್ಕೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸದಸ್ಯರ ಸಹಕಾರದೊಂದಿಗೆ ಆಸಕ್ತಿ ವಹಿಸಿದ್ದಾರೆ. ಶೀಘ್ರದಲ್ಲಿಯೇ ವೃತ್ತಕ್ಕೆ ಮೊದಲಿನ ವೈಭವ ಮರುಕಳಿಸಲಿದೆ. ಈ ವೃತ್ತವನ್ನು ಕಡೂರಿನ ವರ್ತಕ, ಜನಾನುರಾಗಿಯಾಗಿದ್ದ ಕೆ.ಎಲ್.ವಿಶ್ವನಾಥ ಶೆಟ್ಟರ ಹೆಸರಿನಲ್ಲಿ ಅವರ ಮಕ್ಕಳಾದ ರಾಮಚಂದ್ರಗುಪ್ತ ಮತ್ತು ಸಹೋದರರು ನಿರ್ಮಾಣ ಮಾಡಿಸಿದ್ದರು. 1969ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ವೃತ್ತ ಉದ್ಘಾಟಿಸಿದ್ದರು.
ವೃತ್ತದ ಮಧ್ಯೆ ಅಳವಡಿಸಿದ್ದ ಕಾರಂಜಿಯಲ್ಲಿ ಪ್ರತಿದಿನ ಸಂಜೆ 4ರಿಂದ ರಾತ್ರಿ 8ರವರೆಗೆ ನೀರು ಚಿಮ್ಮುವಂತೆ ವ್ಯವಸ್ಥೆ ಮಾಡಲಾಗುತ್ತಿತ್ತು ಪುತಿ ಸೋಮವಾರ ಸಂತೆಗೆ ಬಂದವರು ಸಂತೆಯಲ್ಲಿ ವ್ಯವಹಾರ ಮುಗಿಸಿ, ವೃತ್ತದ ಬಳಿಯಿರುವ ಪಾಂಡುರಂಗನ ದೇವಸ್ಥಾನದ ಮುಂದೆ ಕುಳಿತು ವಿಶ್ರಾಂತಿ ಪಡೆಯುತ್ತಾ, ವೃತ್ತದಲ್ಲಿ ಚಿಮ್ಮುವ ಕಾರಂಜಿ ಕಣ್ಮುಂಬಿಕೊಂಡು ಊರಿಗೆ ತೆರಳುತ್ತಿದ್ದರು. ಮೊಬೈಲ್ ಫೋನ್‌ಗಳಿಲ್ಲದ ಆ ಕಾಲದಲ್ಲಿ ಕೆ.ಎಲ್.ವಿ. ವ್ಯತ್ರವೇ ಗ್ರಾಮೀಣರಿಗೆ ಹೆಗ್ಗುರುತಾಗಿತ್ತು. ಬಳಿಕ, ನಿರ್ವಹಣೆ ಇಲ್ಲದೆ ವೃತ್ತ ಪಾಳುಬಿದ್ದು, ಕಾರಂಜಿಯಲ್ಲಿ ನೀರು ಬತ್ತಿಹೋಗಿತ್ತು.
