ಉದಯವಾಹಿನಿ,ಬೆಂಗಳೂರು: ಅತ್ಯಾಚಾರ ಆರೋಪದಲ್ಲಿ ಜೈಲುಪಾಲಾಗಿ ಇತ್ತೀಚೆಗೆಷ್ಟೇ ಬಿಡುಗಡೆಯಾಗಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಕೆಲವು ಕಿಡಿಗೇಡಿಗಳು ಮೊಟ್ಟೆ ಎಸೆದಿರುವ ಘಟನೆ ನಡೆದಿದೆ.
ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ನನ್ನ ಮೇಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂದು ಮುನಿರತ್ನ ಆರೋಪಿಸಿದ್ದಾರೆ. ಆರ್ಆರ್ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿದೇವಿ ನಗರ ವಾರ್ಡ್ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ ಶತಮಾನೋತ್ಸವ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿತ್ತು. ಭಾಗಿಯಾಗಲು ಮುನಿರತ್ನ ತೆರಳುತ್ತಿದ್ದ ವೇಳೆ ನಂದಿನಿ ಲೇಔಟ್ ಬಳಿ ಕೆಲವು ಕಿಡಿಗೇಡಿಗಳು ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಸದ್ಯ ಅವರಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮುನಿರತ್ನ ಬೆಂಬಲಿಗರು ಕಂಠೀರವ ಸ್ಟುಡಿಯೋ ಬಳಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
