
ಉದಯವಾಹಿನಿ, ಬಂಟ್ವಾಳ: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಸೈಬರ್ ಅಪರಾಧ ಠಾಣೆ (ಸೆನ್) ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿ ಜೈಲಾಗಿದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಳೆ ಕಟ್ಟಡದಲ್ಲಿ ಆರಂಭಗೊಳ್ಳಲಿದೆ. ಮಂಗಳೂರು ನಿರ್ಮಿತಿ ಕೇಂದ್ರದ ಮೂಲಕ ಹಳೆಯ ಕಟ್ಟಡದ ನವೀಕರಣ ಕಾಮಗಾರಿ ಆರಂಭಗೊಂಡಿದ್ದು, ಕೊಠಡಿ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದೆ. ಜಿಲ್ಲೆಯ ಯಾವುದೇ ಪ್ರದೇಶಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ನಡೆದರೂ, ಸಂತ್ರಸ್ತರು ದೂರು ಸಲ್ಲಿಸಲು ಮಂಗಳೂರಿಗೇ ಹೋಗಬೇಕಿತ್ತು. ಆದರೆ, ಬಂಟ್ವಾಳ ಸೇರಿದಂತೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ ತಾಲ್ಲೂಕಿನ ನಾಗರಿಕರಿಗೆ ಸಮಸ್ಯೆ ಆಗುತ್ತಿತ್ತು. ಮಂಗಳೂರಿನ ಬಾಡಿಗೆ ಕಟ್ಟಡದಲ್ಲಿ ಸೆನ್ ಠಾಣೆ ಕಾರ್ಯಾಚರಿಸುತ್ತಿದ್ದು, ಶೀಘ್ರವೇ ಬಿ.ಸಿ.ರೋಡಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ಇಲಾಖೆ ಸಿದ್ಧತೆ ನಡೆಸಿದೆ. ಸುಮಾರು ₹ 35 ಲಕ್ಷ ವೆಚ್ಚದಲ್ಲಿ ದುರಸ್ತಿ ಮತ್ತು ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಹಳೆಯ ಶೈಲಿಯ ಕಟ್ಟಡ ಹಾಗೇ ಉಳಿಸುವ ದೃಷ್ಟಿಯಿಂದ ಚಾವಣಿ ಅಳವಡಿಸಿ ನವೀಕರಣಗೊಳಿಸಲಾಗುತ್ತಿದೆ.
