ಉದಯವಾಹಿನಿ, ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತಹತ್ಯೆ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಇಂದು ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿತು.ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಸುನೀಲ್ ವಲ್ಯಾಪುರೆ, ಸಿ.ಟಿ.ರವಿ, ಎಂ.ರವಿಕುಮಾರ್ ಸೇರಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರಿಯಾಂಕ ಖರ್ಗೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು.
ಐವಾನ್-ಇ-ಶಾಹಿ ಪ್ರದೇಶದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ಬಿಜೆಪಿ ಮುಖಂಡರು ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರೂ ಪೊಲೀಸರು ಅವಕಾಶ ಕೊಡಲಿಲ್ಲ. ನಗರದ ಜಗತ್ ಸರ್ಕಲ್ನಿಂದ ಎಸ್ಪಿಪಿ ವೃತ್ತದವರೆಗೆ ಮುಂಜಾನೆಯಿಂದಲೇ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಪ್ರತಿಭಟನಾಕಾರರನ್ನು ಮಾರ್ಗ ಮಧ್ಯದಲ್ಲೇ ತಡೆದರು.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರಿಯಾಂಕ ಖರ್ಗೆ ಅವರ ನಿವಾಸವಿರುವ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿತ್ತು.
ಪಕ್ಕದ ಜಿಲ್ಲೆಗಳಾದ ಯಾದಗಿರಿ, ಬೀದರ್ನಿಂದಲೂ ಹೆಚ್ಚುವರಿಯಾಗಿ ಪೊಲೀಸರನ್ನು ಕರೆಸಿಕೊಂಡಿದ್ದರಿಂದ ಕಲಬುರಗಿ ಜಿಲ್ಲೆ ಅಕ್ಷರಶಃ ಏಳು ಸುತ್ತಿನ ಕೋಟೆಯಾಗಿತ್ತು. ಖರ್ಗೆಯವರ ನಿವಾಸದ ಸುತ್ತಮುತ್ತ ಯಾವುದೇ ವಾಹನಗಳು ಬಂದರೂ ತಪಾಸಣೆ ನಡೆಸಿಯೇ ಬಿಡಲಾಗುತ್ತಿತ್ತು. ಐಜಿಪಿ, ಕಲಬುರಗಿ ನಗರ ಪೊಲೀಸ್ ಆಯುಕ್ತರು, ಎಸ್ಪಿ ಡಿವೈಎಸ್ಪಿ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿತ್ತು.
