ಉದಯವಾಹಿನಿ, ಕೆಂಗೇರಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಂಡೆಮಠ ವಾರ್ಡ್ ಸರ್ವೆ ನಂಬರ್ ೧೬ ರ ಒಂದು ಎಕರೆ ನಾಲ್ಕು ಗುಂಟೆ ಸರ್ಕಾರಿ ಗೋಮಾಳ ಜಾಗಕ್ಕೆ ಕೆಂಗೇರಿ ಸಹಾಯಕ ಕಂದಾಯ ಅಧಿಕಾರಿಗಳು ಬೆಥೆಸ್ಥ ಚರ್ಚ್ ಮತ್ತು ಬೆಥೆಸ್ಥ ದ ಶಾಲೆಯ ಹಿಂಭಾಗ ಸರ್ಕಾರಿ ಜಾಗದಲ್ಲಿ ಖಾಸಗಿಯವರು ನಿರ್ಮಾಣ ಮಾಡಲಾಗಿರುವ ಬಡಾವಣೆ, ನಿವೇಶನ ಮನೆಗಳಿಗೆ ಖಾತೆಗಳನ್ನು ಮಾಡಿದ್ದಾರೆ ಎಂದು ಬಿಬಿಎಂಪಿ ಬಂಡೆಮಠ ವಾರ್ಡ್ ಕಮಿಟಿ ಸಭೆಯಲ್ಲಿ ಸಾಮಾಜಿಕ ಹೋರಾಟಗಾರರು ದೂರಿದರು.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ವಳಗೇರಹಳ್ಳಿ ಗ್ರಾಮದ ಸರ್ವೆ ನಂಬರ್ ೧೬ ರ ಜಮೀನು ಒತ್ತುವರಿಗೆ ಜೀವನ್ ಕೆ ಎಂಬುವರು ಲೋಕಾಯುಕ್ತ ಕಚೇರಿಗೆ ದೂರನ್ನು ದಾಖಲಿಸಿದ್ದರು. ದೂರನ್ನು ಆದರಿಸಿ ರಾಜಸ್ವ ನೀರಿಕ್ಷಕರು ಕೆಂಗೇರಿ ವೃತ್ತ ಹಾಗೂ ತಾಲೂಕು ಭೂಮಾಪಕರು ಸಲ್ಲಿಸಿರುವ ಸರ್ವೆ ನಕ್ಷೆ ವರದಿಯಂತೆ ಒತ್ತುವರಿಯಾಗಿರುವುದನ್ನ ಖಚಿತಪಡಿಸಿಕೊಂಡ ಬೆಂಗಳೂರು ದಕ್ಷಿಣ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ರಿಜಿಸ್ಟರ್ ರವರಿಗೆ ದೂರನ್ನು ದಾಖಲಿಸಿದ್ದಾರೆ. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದರೂ ಭೂ ಮಾಫಿಯಾ ರವರ ಆಮಿಷಕ್ಕೆ ಒಳಗಾಗಿ, ಯಾವುದೇ ರೀತಿಯ ಪರಿಶೀಲನೆ ನಡೆಸದೆ ಕಣ್ಣು ಮುಚ್ಚಿ ಕುಳಿತುಕೊಂಡು ಬಿಬಿಎಂಪಿ ಕೆಂಗೇರಿ ಕಂದಾಯ ಅಧಿಕಾರಿಗಳು ಸರ್ಕಾರಿ ಗೋಮಾಳ ಜಾಗಕ್ಕೆ ಖಾತೆ, ನಕ್ಷೆ ಮಂಜೂರು ಮಾಡಿ ಹಾಗೂ ತೆರಿಗೆಯನ್ನು ಪಾವತಿಸಿಕೊಂಡಿರುವುದು ಅವರ ಕರ್ತವ್ಯ ಲೋಪಕ್ಕೆ ಸಾಕ್ಷಿಯಾಗಿದೆ, ದುಡ್ಡು ಕೊಟ್ಟರೆ ಕಣ್ಣು ಮುಚ್ಚಿಕೊಂಡು ವಿಧಾನಸೌಧಕ್ಕೂ ಬೋಗಸ್ ಖಾತೆ ಮಾಡಲಿದ್ದಾರೆ.
