ಉದಯವಾಹಿನಿ, ದಾವಣಗೆರೆ : ರಾಜ್ಯದಲ್ಲಿ ಶೇ.60ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅದನ್ನು ಸಾಬೀತು ಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ನಾಯಕರು ದಾಖಲೆಗಳು ಇಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಭ್ರಷ್ಟಚಾರ ಹಾಗೂ ಶೇ.60ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದಾದರೆ ಅದನ್ನು ದಾಖಲೆಗಳ ಸಹಿತ ಸಾಬೀತು ಪಡಿಸಬೇಕು. ದಾಖಲೆ ಇಲ್ಲದೆ ಬಾಯಿ ಮಾತಿಗೆ ಆರೋಪ ಮಾಡುವುದು ಸರಿಯಲ್ಲ ಎಂದರು.ಮಾರ್ಚ್ ತಿಂಗಳಿನಲ್ಲಿ ತಾವು ರಾಜ್ಯ ಬಜೆಟ್ ಮಂಡಿಸಲಿದ್ದು, ಅದರ ತಯಾರಿಗಾಗಿ ಪೂರ್ವಭಾವಿ ಚರ್ಚೆ ಆರಂಭಿಸಿದ ಬಳಿಕ, ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡುವುದಾಗಿ ತಿಳಿಸಿದರು. ಸಾರಿಗೆ ನಿಗಮಗಳ ಪ್ರಯಾಣ ದರ ಹೆಚ್ಚಳ ಎಲ್ಲ ಕಾಲಕ್ಕೂ ನಡೆದಿದೆ. ಹಣದುಬ್ಬರ, ಇಂಧನ ಬೆಲೆ, ಬಸ್ ಖರೀದಿ ದರ ಹಾಗೂ ಸಿಬ್ಬಂದಿಗಳ ವೇತನ ಹೆಚ್ಚಳ ಸೇರಿ ವಿವಿಧ ಕಾರಣಗಳಿಗೆ ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತಿದೆ. 2015ರಲ್ಲಿ ದರ ಪರಿಷ್ಕರಣೆಯಾಗಿತ್ತು. ಸಾರಿಗೆ ನಿಗಮಗಳು ಸಂಕಷ್ಟದಲ್ಲಿವೆ ಎಂಬ ಕಾರಣಕ್ಕೆ ದರ ಪರಿಷ್ಕರಣೆಗೆ ಬಹಳ ದಿನಗಳ ಬೇಡಿಕೆ ಇತ್ತು ಎಂದು ಸಮರ್ಥಿಸಿಕೊಂಡರು.
ರಾಜ್ಯ ಸರ್ಕಾರ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ ಎಂದು ಟೀಕಿಸುವ ಬಿಜೆಪಿ, ಜೆಡಿಎಸ್ ಕಾಲದಲ್ಲಿ ಪ್ರಯಾಣ ದರ ಹೆಚ್ಚಿಸಿರಲಿಲ್ಲವೇ ? ಅಷ್ಟೇ ಏಕೆ ಕೇಂದ್ರ ಸರ್ಕಾರ ರೈಲ್ವೆ ದರವನ್ನು ಹೆಚ್ಚಿಸಿರಲಿಲ್ಲವೇ ಎಂದು ತಿರುಗೇಟು ನೀಡಿದರು.ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ರಾಜ್ಯದ ನಾಯಕರ ಹಂತದಲ್ಲಿ ಯಾವುದೇ ನಿರ್ಧಾರವಾಗುವುದಿಲ್ಲ ಎಂದರು.
