ಉದಯವಾಹಿನಿ, ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ತೂಬಿನ ದುರವಸ್ಥೆಯಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿದೆ. ಇದು ಗ್ರಾಮಸ್ಥರಲ್ಲಿ ಬೇಸರ ಉಂಟು ಮಾಡಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯು 389 ಎಕರೆ ವಿಸ್ತೀರ್ಣ ಹೊಂದಿದೆ. ಇದು ಒಮ್ಮೆ ತುಂಬಿದರೆ ನಾಯಕನಹಟ್ಟಿ ಪಟ್ಟಣ ಸೇರಿ ಜಾಗನೂರಹಳ್ಳಿ, ಮಾದಯ್ಯನಹಟ್ಟಿ, ಮನುಮ್ಮೆನಹಟ್ಟಿ, ಎನ್.ಮಹದೇವಪುರ, ಎನ್.ಗೌರಿಪುರ, ಓಬಯ್ಯನಹಟ್ಟಿ, ರೇಖಲಗೆರೆ, ಗುಂತಕೋಲಮ್ಮನಹಳ್ಳಿ ಸೇರಿ ಹತ್ತಾರು ಗ್ರಾಮಗಳಲ್ಲಿರುವ ಕೊಳವೆಬಾವಿಗಳ ಅಂತರ್ಜಲ ವೃದ್ಧಿಯಾಗುತ್ತದೆ. ಈ ಕೆರೆ ನಾಯಕನಹಟ್ಟಿ ಪಟ್ಟಣದ 10 ವಾರ್ಡಗಳಿಗೆ ಕುಡಿಯುವ ನೀರಿನ ಪ್ರಮುಖ ಜಲಮೂಲವಾಗಿದೆ. ಇಂತಹ ಮಹತ್ವ ಹೊಂದಿರುವ ಚಿಕ್ಕಕೆರೆಯು ನಿರಂತರ ಬರಗಾಲದಿಂದಾಗಿ 25 ವರ್ಷಗಳಿಂದ ಬತ್ತಿ ಬಿರುಕುಬಿಟ್ಟಿತ್ತು. ಇದರ ಪರಿಣಾಮ ಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿತ್ತು. ಹಲವು ವರ್ಷಗಳಿಂದ ರೈತರು ತಮ್ಮ ಜಮೀನುಗಳಿಗೆ ಮತ್ತು ಕೆಲವರು ಇಟ್ಟಿಗೆ ತಯಾರಿಸಲು ಜೆಸಿಬಿ, ಟ್ರ್ಯಾಕ್ಟರ್ ಮತ್ತು ಟಿಪ್ಪರ್‌ಗಳ ಮೂಲಕ ಹೂಳನ್ನು ಖಾಲಿ ಮಾಡಿದ್ದರು.
