ಉದಯವಾಹಿನಿ, ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ತಂಪಾದ ಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಅನೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ ೧೫ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಮುಂದಿನ ಮೂರು ದಿನ ಕನಿಷ್ಠ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಇನ್ನೂ ೨ ರಿಂದ ೪ ಡಿ.ಸೆ. ಇಳಿಕೆಯಾಗಲಿದೆ ಎನ್ನಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಶೀತ ಹವಾಮಾನದ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ, ರಾಯಚೂರು ಜಿಲ್ಲೆಗಳಲ್ಲಿ ತಣ್ಣನೆಯ ಗಾಳಿ ಬೀಸಲಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ರಾಜ್ಯಾದ್ಯಂತ ಚಳಿ ಪ್ರಮಾಣ ಹೆಚ್ಚಿದ್ದು, ಕೆಲವೆಡೆ ತಾಪಮಾನ ೧೫ ಡಿಗ್ರಿಗಿಂತ ಕಡಿಮೆಯಾಗಿದೆ. ಮುಂದಿನ ೩ ದಿನಗಳಲ್ಲಿ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಕನಿಷ್ಠ ತಾಪಮಾನವು ೨ ರಿಂದ ೪ ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಮತ್ತು ರಾಜ್ಯದಾದ್ಯಂತ ಮಂಜಿನ ವಾತಾವರಣ ಮುಂದುವರಿಯುತ್ತದೆ. ಈ ನಡುವೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!