ಉದಯವಾಹಿನಿ, ಬೆಂಗಳೂರು : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಚಿವರು, ಶಾಸಕರು ಮತ್ತು ಪ್ರಮುಖರ ಸಭೆಯನ್ನು ರದ್ದುಗೊಳಿಸಿಲ್ಲ. ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸಭೆಯನ್ನು ಯಾರಾದರೂ ವಿರೋಧಿಸಿದರೆ ಅವರಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ನಮಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿಷ್ಠುರವಾಗಿ ಪ್ರತಿಕ್ರಿಯಿ ಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಸಮಾವೇಶದ ಹಿನ್ನೆಲೆಯಲ್ಲಿ ಸಮುದಾಯದ ಬಹಳಷ್ಟು ಬೇಡಿಕೆಗಳು ಈಡೇರಿವೆ. ಅವುಗಳ ಬಗ್ಗೆ ಚರ್ಚೆ ನಡೆಸಲು ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ತಡರಾತ್ರಿ ಸಭೆ ನಿಗದಿಯಾಗಿದ್ದರಿಂದಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವ ಅಗತ್ಯವಿಲ್ಲ. ಇದು ರಾಜಕೀಯ ಪ್ರೇರಿತ ಅಲ್ಲ ಎಂದರು.ಇದು ಆಂತರಿಕವಾದ ಸಭೆಯಾದ್ದರಿಂದ ಹೈಕಮಾಂಡ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಮಗೆ ಕರೆ ಮಾಡಿ ತಾವು ಸಭೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದರು. ಸಭೆಗೆ ಬರುವಂತೆ ಅವರಿಗೆ ಕರೆ ನೀಡಲಾಯಿತು. ಆದರೆ ಸದ್ಯಕ್ಕೆ ಕಾಲಾವಕಾಶ ಇಲ್ಲ. ಹಾಗಾಗಿ ಸಭೆಯನ್ನು ಮುಂದೂಡಿ ಎಂದು ಕರೆ ನೀಡಿದರು.
ನಮ್ಮ ಸಭೆಗೆ ಹೈಕಮಾಂಡ್ ನಾಯಕರು ಭಾಗವಹಿಸುವುದಾದರೆ ಅದು ಇನ್ನೂ ಒಳ್ಳೆಯದು. ಹೀಗಾಗಿ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಸಮಯ ನೋಡಿಕೊಂಡು ಸಭೆ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದರು.ಸಭೆಯನ್ನು ನಿಲ್ಲಿಸಲು ಬೇರೆಯವರು ಪ್ರಭಾವ ಬೀರಿದ್ದಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದ ಅವರು, ಒಂದು ವೇಳೆ ಗೊತ್ತಿದ್ದರೂ ಎಲ್ಲವನ್ನೂ ಹೇಳಲಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಸಭೆ ನಡೆಸುವುದು ರಹಸ್ಯವೇನಲ್ಲ. ನಾವು ರಾಜಕಾರಣ ಮಾಡಬೇಕು ಎಂದಾದರೆ ಬಹಿರಂಗವಾಗಿಯೇ ಮಾಡುತ್ತೇವೆ. ನಾಲ್ಕು ಗೋಡೆ ಮಧ್ಯೆ ರಹಸ್ಯ ಸಭೆ ನಡೆಸುವ ಅಗತ್ಯ ನಮಗಿಲ್ಲ. ದಲಿತ ಸಮುದಾಯದಲ್ಲಿ ಅನೇಕ ಸಮಸ್ಯೆಗಳಿವೆ. ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪೇನೂ ಅಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!