ಉದಯವಾಹಿನಿ, ವಿಜಯನಗರ : ನಮ್ಮ ಪರಿಸರ, ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಆದರೆ, ತುಂಗಭದ್ರೆ ಮಲಿನತೆಯಿಂದ ಕೆಳ ಭಾಗದ ಜನರಲ್ಲಿ ನಾನಾ ರೀತಿಯ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಜೀವಜಲ ನೀಡುವ ನದಿಗಳು ಮಲಿನಗೊಳ್ಳದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿದರು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಪರ್ಯಾವರಣ ಟ್ರಸ್ಟ್ ನೇತೃತ್ವದಲ್ಲಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನದ ಭಾಗವಾಗಿ ಹೊಸಪೇಟೆಯ ವಿಎನ್‍ಸಿ ಸ್ವತಂತ್ರ ಪಿಯು ಕಾಲೇಜ್‍ನಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. ಶುದ್ಧ ಗಾಳಿ ಮತ್ತು ನೀರು ಸೇವನೆಯಿಂದ ಎಂತಹ ರೋಗವನ್ನಾದರೂ ಎದುರಿಸಬಹುದು. ಅಲ್ಲದೇ, ತಾವು ಕಳೆದ 32 ವರ್ಷಗಳಿಂದ ಆಸ್ಪತ್ರೆಗೆ ಹೋಗಿಯೇ ಇಲ್ಲ ಎಂಬುದನ್ನು ತಿಳಿಸಿದ ಅವರು, ಜೀವನದಲ್ಲಿ ಕನಸು ಕಾಣಬೇಕು. ಆಗ ಅದನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯುತ್ತದೆ. ತಾವು ಇಂತಹ ಕನಸು ಕಂಡಿದ್ದರಿಂದಲೇ ಪೈಲಟ್ ಆದುದು, ಪ್ಯಾರಾಚ್ಯೂಟ್‍ನೊಂದಿಗೆ ವಿಮಾನದಿಂದ ಧುಮುಕಿದ ಸಾಹಸವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ನದಿಗಳ ಉಳಿವಿಗಾಗಿ ಕೈ ಜೋಡಿಸದಿದ್ದರೆ, ಭವಿಷ್ಯದಲ್ಲಿ ಚಿತ್ರ ಪಟಗಳಲ್ಲಿ ಮಾತ್ರ ಕಾಣುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!