ಉದಯವಾಹಿನಿ, ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆ ಖಂಡಿಸಿ ವಿವಿಧ ದಲಿತ ಸಂಘಟನೆಗಳು ಹುಬ್ಬಳ್ಳಿ-ಧಾರವಾಡ ಬಂದ್‍ಗೆ ಇಂದು ಕರೆ ನೀಡಿದ್ದು, ಅವಳಿ ನಗರಕ್ಕೆ ಬಂದ್ ಬಿಸಿ ತಟ್ಟಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬಸ್, ಆಟೋರಿಕ್ಷಾ ಹಾಗೂ ಇನ್ನಿತರ ವಾಹನಗಳ ಸಂಚಾರ ಬೆಳಿಗ್ಗೆಯಿಂದ ಇರಲಿಲ್ಲ. ಅಲ್ಲಲ್ಲಿ ಪ್ರತಿಭಟನಾಕಾರರು ಟೈರ್‍ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದುದು ಕಂಡುಬಂತು. ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿಯೂ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ವಜಾಗೊಳಿಸಲು ಆಗ್ರಹಿಸಲಾಯಿತು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ದುರ್ಗದ ಬೈಲ್, ಜನತಾ ಬಜಾರ್, ಹಳೇ-ಹುಬ್ಬಳ್ಳಿಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವುದು ಕಂಡು ಬಂತು. ತರಕಾರಿ ಮಾರುಕಟ್ಟೆಗಳು ಸಹ ಸ್ತಬ್ದವಾಗಿದ್ದವು. ನಗರದ ಪಿ.ಬಿ ರಸ್ತೆ, ಗೋಕುಲ್ ರಸ್ತೆ, ಕುಸುಗಲ್ ರಸ್ತೆ, ಗದಗ್ ರಸ್ತೆ, ಕಾರವಾರ್ ರಸ್ತೆ, ಗಬ್ಬೂರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಂಡುಬರಲಿಲ್ಲ.
ಬಸ್ ಹಾಗೂ ಆಟೋರಿಕ್ಷಾ ಸೇರಿದಂತೆ ವಿವಿಧ ಖಾಸಗಿ ವಾಹನಗಳನ್ನು ನಗರದ ಹೊರವಲಯಗಳಲ್ಲಿಯೂ ತಡೆದು ಪ್ರತಿಭಟಿಸಿದ್ದರಿಂದ ಪ್ರಯಾಣಿಕರು ಪರದಾಡಿ ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಿದ್ದುದು ಕಂಡುಬಂತು. ಬೈಪಾಸ್ ರಸ್ತೆಯಲ್ಲಿಯೇ ವಾಹನಗಳು ಬೇರೆ ಬೇರೆ ರಸ್ತೆಗಳ ಮೂಲಕ ಸಂಚರಿಸಲು ಪರದಾಡಿದವು. ರೈಲ್ವೆ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ತೆರಳುವ ಜನತೆಯೂ ವಾಹನ ವ್ಯವಸ್ಥೆ ಇರದೇ ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಿದ್ದುದು ಕಂಡುಬಂತು. ಧಾರವಾಡದ ಜ್ಯುಬಲಿ ವೃತ್ತ, ಸುಭಾಸ್ ರಸ್ತೆ ಸೇರಿದಂತೆ ವಿವಿಧ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿಯೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
