ಉದಯವಾಹಿನಿ, ಬೆಂಗಳೂರು: ನಗರದಲ್ಲಿ ಗಂಭೀರ ಪ್ರಕರಣಗಳು ಹಾಗೂ ಅಪಘಾತಗಳು ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು. ಆಡುಗೋಡಿಯಲ್ಲಿನ ನಗರ ಸಶಸ್ತ್ರ ಮೀಸಲು ಪಡೆಯ ಕವಾಯಿತು ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಮಾಸಿಕ ಕವಾಯಿತಿನಲ್ಲಿ ಅವರು ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಪ್ರಮುಖವಾಗಿ ನಮಗೆ ಮಾದಕ ವಸ್ತು ಸಾಗಾಣೆ ಮತ್ತು ಮಾರಾಟ ಪ್ರಕರಣಗಳು ಸವಾಲಾಗಿತ್ತು. ಈಗಾಗಲೇ ಸಾಕಷ್ಟು ನಿಯಂತ್ರಣ ಮಾಡಿದ್ದೇವೆ. ಅಲ್ಲದೆ ಸೈಬರ್ ಪ್ರಕರಣಗಳ ಹಾವಳಿಯನ್ನು ತಹಬದಿಗೆ ತರಲಾಗುತ್ತಿದೆ ಎಂದರು.
ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಪೊಲೀಸರ ಕಾರ್ಯ ಮಹತ್ತರವಾಗಿದೆ. ಬೆಂಗಳೂರು ನಗರ ಮಹಿಳೆಯರಿಗೆ ಅತ್ಯಂತ ಸುರಕ್ಷಿತವಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ವರ್ಷಗಟ್ಟಲೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ನಗರ ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಶಿಸಿದ್ದಾರೆ. ಇದೇ ರೀತಿ ಮುಂದೆಯೋ ಕರ್ತವ್ಯ ನಿರ್ವಹಿಸುವಂತೆ ಆಯುಕ್ತರು ಕಿವಿ ಮಾತು ಹೇಳಿದರು.
