ಉದಯವಾಹಿನಿ,ಬೆಂಗಳೂರು: ಶರಣಾಗತರಾದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಬಿಸಾಕಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರಿಗೆ ಪರಿಹಾರ ಮತ್ತು ಪುನರ್‌ ವಸತಿ ಕಲ್ಪಿಸುವ ವಿಚಾರದಲ್ಲಿ ತೋರಿದ ಮುತುವರ್ಜಿಯನ್ನು ಶಸಾ್ತ್ರಸ್ತ್ರ ಹುಡುಕುವುದರಲ್ಲಿ ಸರ್ಕಾರ ತೋರುತ್ತಿಲ್ಲ ಎಂಬ ಬಿಜೆಪಿ ಆರೋಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಮಾಡುವ ಕೆಲಸ ಮಾಡುತ್ತೇವೆ. ಕಾಡಲ್ಲಿ ಎಲ್ಲಿ ಇಟ್ಟಿದ್ದಾರೆ ಎಂಬುದನ್ನು ನೆರವು ಪಡೆದು ಹುಡುಕುತ್ತಾರೆ. ಇದಕ್ಕೆಲ್ಲ ಪ್ರಕ್ರಿಯೆ ಇದೆ. ಅದರ ಅನುಸಾರ ಪೊಲೀಸರು ಕೆಲಸ ಮಾಡುತ್ತಾರೆ. ಇದೆಲ್ಲ ಬಿಜೆಪಿಯವರಿಗೆ ಗೊತ್ತಿಲ್ಲವೇ?, ಅವರು ಕೂಡ ಸರ್ಕಾರ ನಡೆಸಿದ್ದಾರೆ, ಆಗಲೂ ಇದೇ ಪೊಲೀಸ್‌‍ ಇಲಾಖೆ ಇತ್ತಲ್ಲವೇ ಎಂದು ತಿರುಗೇಟು ನೀಡಿದರು.

ನಕ್ಸಲ್‌ ರವೀಂದ್ರ ಎಂಬಾತ ನಾಪತ್ತೆ ಬಗ್ಗೆ ಪ್ರತಿಕ್ರಿಯಿಸಿ, ಶರಣಾಗತರಾಗಿರುವ ಗುಂಪಿನವರು ಆತನನ್ನು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ. ತನಿಖೆ ನಡೆದಿದೆ. ನಕ್ಸಲ್‌ ಚಟುವಟಿಕೆ ಬಗ್ಗೆ ನಮಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ಹೊರಗಡೆಯಿಂದ ಬಂದರೆ ನಿಗಾ ವಹಿಸಲಿದ್ದರೆ ಎಂದು ಹೇಳಿದರು.
ಎನ್‌ಕೌಂಟರ್‌ಲ್ಲಿ ಮೃತಪಟ್ಟ ನಕ್ಸಲ್‌ ವಿಕ್ರಮ್‌ ಗೌಡ ಅವರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ಬೇಡಿಕೆಯನ್ನು ಪರಿಶೀಲಿಸಲಿದ್ದಾರೆ. ನಕ್ಸಲರು ಶರಣಾಗತರಾಗಿರುವ ಪ್ರಕರಣ ಮತ್ತು ವಿಕ್ರಮ್‌ ಗೌಡ ಪ್ರಕರಣ ಬೇರೆ ಎಂದರು.

Leave a Reply

Your email address will not be published. Required fields are marked *

error: Content is protected !!