ಉದಯವಾಹಿನಿ, ಬೆಂಗಳೂರು: ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯತ್, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಹತ್ವದ ಸಭೆ ನಡೆಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಮಾಜಿ ಶಾಸಕರು, ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಪಕ್ಷದ ಕೆಲವು ಪದಾಧಿಕಾರಿಗಳಿಗೆ ಮಾತ್ರ ಭೋಜನಕೂಟಕ್ಕೆ ಆಹ್ವಾನ ಕೊಡಲಾಗಿತ್ತು.
ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ನಡೆದ ಮೊದಲ ಭೋಜನಕೂಟಕ್ಕೆ ಮಾಜಿ ಶಾಸಕರು, ಮಾಜಿ ವಿಧಾನಪರಿಷತ್‌ಸದಸ್ಯರು, ಪಕ್ಷದ ಪ್ರಮುಖರು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಮೇಲ್ನೋಟಕ್ಕೆ ಇದೊಂದು ಪಕ್ಷ ಸಂಘಟನೆ ಕುರಿತಾಗಿ ನಡೆಯಲಿರುವ ಸಭೆ ಎಂದು ಹೇಳಲಾಗಿತ್ತಾದರೂ ತಮ್ಮ ನಾಯಕತ್ವದ ವಿರುದ್ಧ ಕತ್ತಿ ಮಸೆಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರ ಭಿನ್ನಮತೀಯರಿಗೆ ತಿರುಗೇಟು ನೀಡುವ ನೆಪದಲ್ಲೇ ಸಭೆ ಆಯೋಜಿಸಲಾಗಿತ್ತು.
ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಮುಖರೊಬ್ಬರು ಖುದ್ದು ಆಸಕ್ತಿ ವಹಿಸಿ ಮಾಜಿ ಶಾಸಕರು ಮತ್ತು ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರನ್ನು ಸಭೆಗೆ ಆಹ್ವಾನಿಸಿದ್ದರು. ಭೋಜನಕೂಟಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಪ್ರಮುಖರು ಭಾಗವಹಿಸುವ ಮೂಲಕ ವಿಜಯೇಂದ್ರ ನಾಯಕತ್ವಕ್ಕೆ ಬಹುತೇಕರು ಬಹುಪರಾಕ್ ಹೇಳಿದ್ದಾರೆ. 2028ರ ವಿಧಾನಸಭಾ ಚುನಾವಣೆವರೆಗೂ ವಿಜಯೇಂದ್ರ ನಾಯಕತ್ವ ಬದಲಾವಣೆ ಮಾಡಬಾರದು. ಅವರ ಮುಂದಾಳತ್ವದಲ್ಲೇ ಚುನಾವಣೆ ಎದುರಿಸೋಣ. ಸಾಧ್ಯವಾದರೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವ ತೀರ್ಮಾನಕ್ಕೂ ಬರಲಾಗಿದೆ ಎಂದು ತಿಳಿದುಬಂದಿದೆ.
