ಉದಯವಾಹಿನಿ, ಸಕಲೇಶಪುರ: ಲಾರಿಯಲ್ಲಿ ಭತ್ತ ಕಟಾವು ಮಾಡಿದ ಹುಲ್ಲು ಸಾಗಣೆ ಮಾಡುವಾಗ ವಿದ್ಯುತ್ ತಂತಿ ತಗುಲಿ ಬೆಂಕಿಹೊತ್ತಿಕೊಂಡು ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ಅರೆಕೆರೆ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಅರೆಕರೆ ಗ್ರಾಮದ ನವೀನ್ ಹಾಗೂ ಇತರ ರೈತರಿಗೆ ಸೇರಿದ ಹುಲ್ಲು ಸುಟ್ಟುಹೋಗಿರುವುದಲ್ಲದೆ, ಗೊಗಿ, ಗಿರೀಶ್ ಹಾಗೂ ಅರಕೆರೆ ರಾಮಚಂದ್ರಗೌಡ ಅವರ ಕಾಫಿ ತೋಟದಲ್ಲಿ ಕೆಲವು ಕಾಫಿ ಗಿಡಗಳು ಸಹ ಸುಟ್ಟು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ರಾಜು ಹಾಗೂ ಸಿಬ್ಬಂದಿ ದಾವಿಸಿ ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಿಕೆ ಹಾಗೂ ಕಾಳು ಮೆಣಸು ಬೆಳೆ ಹಾನಿಯಾಗುವುದು ತಪ್ಪಿದೆ.
