ಉದಯವಾಹಿನಿ, ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಎಂಎಲ್ಸಿ ಸಿಟಿರವಿ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಿದ್ದಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಪ್ರಕರಣವನ್ನು ಯಾವ ಕಾರಣಕ್ಕೆ ಸಿಐಡಿಗೆ ವಹಿಸಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ,ಸದನದಲ್ಲಿ ನಡೆದ ಘಟನೆಯ ಅಲ್ಲಿಯೇ ಚರ್ಚಿಸುವುದು, ಮುಕ್ತಾಯ ಮಾಡುವ ಸಾರ್ವಭೌಮತ್ವ ಅಧಿಕಾರ ಸದನಕ್ಕೆ ಇರುತ್ತದೆ.ಅದರಂತೆ ಡಿ.೧೯ರ ನಡೆದ ಘಟನೆಗೆ ಸಂಬಂಧ ಪರಾಮರ್ಶೆ ನಡೆಸಿ ಪೀಠದಿಂದ ತೀರ್ಪು ನೀಡಲಾಗಿದೆ ಎಂದಿದ್ದಾರೆ.

ಸದನದ ಆವರಣದ ಒಳಗೆ ಶಿಸ್ತು ಸಂರಕ್ಷಿಸುವುದು ನಿಯಂತ್ರಿಸುವ ಅಧಿಕಾರ ಸಭಾಪತಿಗೆ ಪ್ರದತ್ತವಾಗಿದೆ. ಸಭಾಪತಿ ತೀರ್ಪೇ ಇದರಲ್ಲಿ ಅಂತಿಮ. ಶಾಸಕಾಂಗಕ್ಕೆ ಮತ್ತು ಸಭಾಪತಿಯವರಿಗೆ ಪ್ರದತ್ತವಾದ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ಕಾರ್ಯಾಂಗವು ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಸಾಂವಿಧಾನಿಕ ಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಭಾಸವಾಗುತ್ತಿದೆ. ವಿನಾಕಾರಣ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಂಘರ್ಷದ ಪ್ರಮೇಯ ನಿರ್ಮಾಣ ಆಗಬಾರದು. ಸದನದಲ್ಲಿ ನಡೆದ ಘಟನೆ ಸಭಾಪತಿಯವರ ಕಾರ್ಯವ್ಯಾಪ್ತಿಗೆ ನಿಹಿತವಾಗಿರುವುದು ತಮಗೆ ತಿಳಿದ ವಿಚಾರ ಎಂದು ಹೊರಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!