ಉದಯವಾಹಿನಿ, ಬೆಂಗಳೂರು: ರಾಜ್ಯಗಳಿಗೆ ಅನ್ಯಾಯ, ತಾರತಮ್ಯವಾಗಿರುವುದನ್ನು 50 ವರ್ಷ ರಾಜ್ಯ ಮತ್ತು ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ನವರು ಏಕೆ ತೆಗೆದು ಹಾಕಲಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1952ರಲ್ಲಿ ಹಣಕಾಸು ಆಯೋಗವನ್ನು ಜಾರಿಗೆ ತಂದವರು ಕಾಂಗ್ರೆಸ್ನವರು. 50 ವರ್ಷಗಳಿಂದ ದೇಶ ಮತ್ತು ರಾಜ್ಯವನ್ನು ಆಳಿದ್ದಾರೆ. ರಾಜ್ಯಗಳಿಗೆ ಆಗುವ ಅನ್ಯಾಯವನ್ನು ಮಾರ್ಗಸೂಚಿಯಲ್ಲಿ ತೆಗೆದು ಹಾಕಬೇಕಿತ್ತು. ಈಗ ಜ್ಞಾನೋದಯವಾಗಿದೆಯೇ ಎಂದು ವ್ಯಂಗ್ಯವಾಡಿದರು.
ಹತ್ತು ವರ್ಷಗಳ ಕಾಲ ಡಾ.ಮನಮೋಹನ್ ಸಿಂಗ್ ಅವರೇ ಪ್ರದಾನಿಯಾಗಿದ್ದರು. ಆಗ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಬೇಕಿತ್ತು ಎಂದು ಜಿಎಸ್ಟಿ ತಾರತಮ್ಯದ ಬಗ್ಗೆ ಕಾಂಗ್ರೆಸ್ ನಾಯಕರಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಕುರಿತಂತೆ ಅವರು ಪ್ರತಿಕ್ರಿಯಿಸಿದರು.
ತೆರಿಗೆ ವಿಚಾರ ಆಮೇಲೆ ಚರ್ಚೆ ಮಾಡಲಿ. ನೈಸ್ ಹೆಸರಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿಕಾರಿಗಳು, ಕಾಂಗ್ರೆಸ್ನವರು ಭೂಮಿ ಲೂಟಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ನೀಡಿ ಎಷ್ಟು ದಿನವಾಗಿದೆ? ಏನು ಮಾಡಿದ್ದಾರೆ? ಎಂದು ರಾಜ್ಯ ಸರ್ಕಾರದ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 2019ರ ಮಾರ್ಗಸೂಚಿ ಪ್ರಕಾರ ಹಣ ನೀಡಬೇಕಿದೆ. ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಡಿನ್ನರ್ ಪಾರ್ಟಿ ಮಾಡಿಕೊಂಡು ಕುಂತಿದ್ದಾರೆ. ರೈತರಿಗೆ ಎರಡು ತಿಂಗಳಲ್ಲಿ ಹಣ ಕೊಡಬೇಕಲ್ಲವೇ? ರೈತರ ಬಗ್ಗೆ ಚಿಂತೆ ಕಾಳಜಿ ಇದೆಯೇ ಎಂದು ಹರಿಹಾಯ್ದರು.
