ಉದಯವಾಹಿನಿ, ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಸಂಕ್ರಾಂತಿಯ ಸುಗ್ಗಿ ಜೋರಾಗಿದ್ದು, ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಕಬ್ಬು, ಗೆಣಸು ಹಾಗೂ ಅವರೆಕಾಯಿ ಖರೀದಿಯ ಭರಾಟೆ ಕಳೆದ ಎರಡು ದಿನಗಳಿಂದ ಜೋರಾಗಿತ್ತು.
ಎಲ್ಲೆಲ್ಲೂ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸುಗಳ ರಾಶಿ. ಮತ್ತೊಂದೆಡೆ ಸಿದ್ಧಪಡಿಸಿದ ಎಳ್ಳು-ಬೆಲ್ಲಗಳ ಘಮ, ಸಕ್ಕರೆ ಅಚ್ಚುಗಳ ಆಕರ್ಷಣೆ, ಎಳ್ಳು-ಬೆಲ್ಲ ತುಂಬಿಕೊಡುವ ಬಗೆ ಬಗೆಯ ಗಿಫ್ಟ್ ಬಾಕ್ಸ್‌ಗಳು. ಕೊಳ್ಳುಗರ ಚೌಕಾಸಿಯೊಂದಿಗೆ ಖರೀದಿಯ ಸಂಭ್ರಮದ ಭರಾಟೆ ಕಂಡುಬಂದಿತು.
ಮಲ್ಲೇಶ್ವರ, ಕೆ.ಆರ್.ಮಾರುಕಟ್ಟೆ, ಗಾಂಧಿಧಿಬಜಾರ್, ಯಶವಂತಪುರ, ಬಸವನಗುಡಿ, ಜಯನಗರ, ವಿಜಯನಗರ, ದಾಸರಹಳ್ಳಿ, ಮಡಿವಾಳ, ಕೆ.ಆರ್.ಪುರ ಮತ್ತಿತರ ಮಾರುಕಟ್ಟೆಗಳಲ್ಲಿಹಬ್ಬದ ಕಳೆ ರಂಗೇರಿತ್ತು.
ಕೆ.ಆರ್.ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ ಹಾಗೂ ಯಶವಂತಪುರ ಮಾರುಕಟ್ಟೆಗಳಿಗೆ ಭಾರೀ ಪ್ರಮಾಣದಲ್ಲಿ ಕಬ್ಬು ಆಗಮಿಸಿದೆ. ಹೀಗಾಗಿ ಒಂದು ಜೋಡಿ ಕಬ್ಬಿನ ಜೊಲ್ಲೆಯು ೮೦ ರಿಂದ ೧೨೦ ರೂ.ವರೆಗೆ ಮಾರಾಟವಾಗುತ್ತಿರುವ ದೃಶ್ಯ ಕಂಡಿತು.
ಇನ್ನೂ, ಗುಣಮಟ್ಟದ ಕಡಲೆಕಾಯಿ ಕೆ.ಜಿ.ಗೆ ೧೦೦ರಂತೆ ಮಾರಾಟವಾಗುತ್ತಿದೆ. ಎಳ್ಳು ಬೆಲ್ಲ ಮಿಶ್ರಿತ ಪೊಟ್ಟಣಗಳು ವಿವಿಧ ಗಾತ್ರಗಳಲ್ಲಿ ಲಭ್ಯ ಇವೆ. ಸಣ್ಣ ಪೊಟ್ಟಣದ ದರ ೫೦. ಮಳಿಗೆಗಳಲ್ಲಿ ಒಂದು ಕೆ.ಜಿ.ಯ ಎಳ್ಳುಬೆಲ್ಲ ಮಿಶ್ರಿತ ಪೊಟ್ಟಣದ ದರ ೩೨೦ರಿಂದ ೩೫೦ ಇದೆ. ಅರ್ಧ ಕೆ.ಜಿ ಸಕ್ಕರೆ ಅಚ್ಚು ೧೫೦ರಂತೆ ಮಾರಾಟವಾಗುತ್ತಿದೆ.
