ಉದಯವಾಹಿನಿ, ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಖಚಿತವಾಗಿ ಲೋಪವಾಗಿದೆ. ಲೋಕಸಭೆ ಚುನಾವಣೆಯಿಂದ ವಿಧಾನಸಭಾ ಚುನಾವಣೆ ನಡುವೆ ಏಕಾಏಕಿ 1 ಕೋಟಿ ಮತದಾರರ ಸಂಖ್ಯೆ ಏರಿಕೆಯಾಗಿರುವುದರ ಬಗ್ಗೆ ಪಾರದರ್ಶಕ ಪರಿಶೀಲನೆಗೆ ಕೇಂದ್ರ ಚುನಾವಣಾ ಆಯೋಗ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿಂದು ಎಐಸಿಸಿಯ ನೂತನ ಕೇಂದ್ರ ಕಚೇರಿ ಉದ್ಘಾಟನೆ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗ ಮತದಾನ ಪ್ರಕ್ರಿಯೆ ನಡೆಸಿರುವುದರಲ್ಲಿ ಅನುಮಾನವಿದೆ. ಇದ್ದಕ್ಕಿದ್ದಂತೆ ಒಂದು ಕೋಟಿಯಷ್ಟು ಬೃಹತ್ ಪ್ರಮಾಣದ ಮತದಾರರು ಪ್ರತ್ಯಕ್ಷವಾದರು.
ನಾನು ಆಯೋಗದ ಮುಂದೆ ನೇರವಾದ ಸವಾಲನ್ನು ಇಟ್ಟಿದ್ದೆ. ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಇಲ್ಲ. ಆ ದತ್ತಾಂಶಗಳನ್ನು ವಾಸ್ತವಾಂಶದ ಮೇಲೆ ನೀಡಿದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಆಯೋಗ ಮಾಹಿತಿ ನೀಡಲು ನಿರಾಕರಿಸಿದೆ. ಮತದಾರರ ಪಟ್ಟಿಯನ್ನು ನೀಡಲು ಆಯೋಗ ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯಿಂದ ವಿಧಾನಸಭೆ ಚುನಾವಣೆಯವರೆಗೂ 1 ಕೋಟಿ ಮತದಾರರ ಸಂಖ್ಯೆ ಏರಿಕೆಯಾಗಲು ಕಾರಣ ಏನು ಎಂಬುದನ್ನು ತಿಳಿಯಲು ಮತದಾರರ ಪಟ್ಟಿ ಪರಿಶೀಲನೆ ಅಗತ್ಯವಿತ್ತು. ಆದರೆ ಚುನಾವಣಾ ಆಯೋಗ ಇದಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆ ಇದೆ. ಆಯೋಗ ಸ್ವಚ್ಛಗೊಳ್ಳುವ ಅಗತ್ಯವಿದೆ. ಇಂತಹ ವ್ಯವಸ್ಥೆ ವಿರುದ್ಧ ನಾವು ಹೋರಾಟ ನಡೆಸಬೇಕು.
