ಉದಯವಾಹಿನಿ, ಚಿತ್ರದುರ್ಗ: ವಿವಿ ಸಾಗರ ಜಲಾಶಯ ಮೈದುಂಬಿಕೊಂಡಿದ್ದರೂ ಜಲರಾಶಿಯನ್ನು ಹಿಡಿದಿಟ್ಟುಕೊಂಡಿರುವ ಹೊಸದುರ್ಗ ತಾಲ್ಲೂಕಿನ ಹಿನ್ನೀರು ಪ್ರದೇಶದ ಜನರಿಗೇ ಆ ನೀರು ಸಿಕ್ಕಿಲ್ಲ. ಜಲಾಶಯಕ್ಕೆ ಮುಖ್ಯಮಂತ್ರಿ ಭೇಟಿ ನೀಡುವ ಹೊತ್ತಿನಲ್ಲಿ ಬಾಗಿನ ಅರ್ಪಿಸುತ್ತಿರುವ ಸಂದರ್ಭದಲ್ಲಿ ಹೊಸದುರ್ಗ ತಾಲ್ಲೂಕಿನ ಜನರು ನೀರಿನ ಪಾಲು ಕೇಳುತ್ತಿದ್ದಾರೆ.
ಬಯಲುಸೀಮೆಯ ಜೀವನಾಡಿ ಎಂದೇ ಪ್ರಖ್ಯಾತಿ ಪಡೆದಿರುವ ವಿವಿ ಸಾಗರ ಜಲಾಶಯ ಕೆಳಭಾಗದಲ್ಲಿರುವ 25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ಒದಗಿಸುತ್ತದೆ. ಜಲಾಶಯದ ಹಿನ್ನೀರು ಪ್ರದೇಶವೇ 28,000 ಹೆಕ್ಟೇರ್ ಇದ್ದು ಅದು ಸಂಪೂರ್ಣವಾಗಿ ಹೊಸದುರ್ಗ ತಾಲ್ಲೂಕನ್ನು ಆವರಿಸಿಕೊಂಡಿದೆ. ಆದರೆ, ಇಲ್ಲಿಯವರೆಗೂ ಹೊಸದುರ್ಗ ತಾಲ್ಲೂಕಿನ ರೈತರು, ಸಾರ್ವಜನಿಕರು ಆ ನೀರು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಕಣ್ಣಮುಂದೆಯೇ ಜಲರಾಶಿ ನಿಂತಿದ್ದರೂ ಹಿನ್ನೀರು ಪ್ರದೇಶದ ರೈತರಿಗೆ ಆ ನೀರು ಬಳಸಿಕೊಳ್ಳಲು ಹಕ್ಕಿಲ್ಲದಂತಾಗಿದೆ. ಹಿನ್ನೀರಿನ ಸಮೀಪದಲ್ಲೆ ಇರುವ ಲಕ್ಕಿಹಳ್ಳಿ, ಮುತ್ತೋಡು, ಕಾರೇಹಳ್ಳಿ, ಗುಡ್ಡದನೇರಲಕರ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿಗೂ ತತ್ವಾರವಿದೆ ಕೊಳವೆಬಾವಿ ಕೊರೆಯಿಸಿದರೂ ನೀರು ಬಾರದ ಸ್ಥಿತಿ ಇದೆ. ಪರಿಸ್ಥಿತಿ ಹೀಗಿರುವಾಗ ಸಮೀಪದಲ್ಲೇ ನಿಂತಿರುವ ವಿವಿ ಸಾಗರ ನೀರಿನಲ್ಲಿ ಹೊಸದುರ್ಗ ತಾಲ್ಲೂಕಿಗೂ ಪಾಲು ಕೊಡಬೇಕು ಎಂದು ರೈತರು ಒತ್ತಾಯಿಸುತ್ತಾರೆ.
