ಉದಯವಾಹಿನಿ, ಬೆಂಗಳೂರು: ಚಿಕ್ಕಮಗಳೂರು ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ಗಿರಿ ದರ್ಗಾ ಸಂಬಂಧಿಸಿದಂತೆ ಸರ್ವೋಚ್ಚನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಎಸ್ಎಲ್ಪಿ ಕುರಿತು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರುಗಳೊಂದಿಗೆ ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ಸಮಾಲೋಚನೆ ಸಭೆ ನಡೆಸಿದರು.ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳ ಸಲಹೆಗಳನ್ನು ಪಡೆದು ಮಾತನಾಡಿದ ಗೃಹ ಸಚಿವರು, ದಾಖಲೆಗಳು ಶಾಶ್ವತವಾಗಿ ಇರುವಂತಹವು. ಈ ವಿಚಾರದಲ್ಲಿ ಕಾನೂನಿನ ಸಲಹೆ ಪಡೆಯಬೇಕಾಗುತ್ತದೆ. ಕರ್ನಾಟಕಕ್ಕೆ ದೇಶದಲ್ಲಿ ಒಳ್ಳೆಯ ಹೆಸರಿದೆ.
ಈ ಸಮಸ್ಯೆಯನ್ನು ಹೆಚ್ಚು ದಿನ ಮುಂದಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಶಾಂತಿ, ಸಾಮರಸ್ಯ ನೆಲೆಸುವಂತೆ ಮಾಡಬೇಕು. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಸರ್ಕಾರ ತೀರ್ಮಾನ ಮಾಡಿದೆ ಎಂದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಬಾಬಾ ಬುಡನ್ಗಿರಿ ದರ್ಗಾ ಕರ್ನಾಟಕದಲ್ಲಿ ಭಾವೈಕ್ಯತೋರಿಸುವ ಸ್ಥಳ. 1975ರವರೆಗೆ ಒಂದು ರೀತಿಯ ಕಾರ್ಯಕ್ರಮಗಳು ನಡೆದರೆ, ತದನಂತರದ ದಿನಗಳಲ್ಲಿ ಅನೇಕ ಗೊಂದಲಗಳನ್ನು ಕಂಡಿದ್ದೇವೆ ಎಂದು ಹೇಳಿದರು.
