ಉದಯವಾಹಿನಿ, ಕೊಪ್ಪಳ: ಗವಿಮಠ ಹಾಗೂ ತಮ್ಮ ಹೆಸರಿನ ಬಗ್ಗೆ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಪರ-ವಿರೋಧದ ಚರ್ಚೆಗಳ ಬಗ್ಗೆ ಮಾತನಾಡುವಾಗ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದರು. ಕೈಲಾಸ ಮಂಟಪದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕೊಪ್ಪಳ ರೈಲು ನಿಲ್ದಾಣಕ್ಕೆ ಗವಿಸಿದ್ದೇಶ್ವರರ ಹೆಸರು ನಾಮಕರಣ ಮಾಡಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಗವಿಸಿದ್ದೇಶ್ವರ ಎಲ್ಲರ ಉಸಿರಿನಲ್ಲಿ ನೆಲೆ ನಿಂತಿರುವಾಗ ಹೆಸರು ಯಾಕೆ..? ಎಂದು ಹೇಳಿ ಭಾವುಕರಾದರು.
ಗವಿಸಿದ್ದೇಶ್ವರನನ್ನು ನಮ್ಮ ಮಠದ ಆವರಣ ಬಿಟ್ಟು ಎಲ್ಲಿಯೂ ಕರೆದುಕೊಂಡು ಹೋಗಬೇಡಿ. ಈಗ ರೈಲು ನಿಲ್ದಾಣ, ಮುಂದೆ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಿ ಎನ್ನುತ್ತೀರಿ. ಅದ್ಯಾವುದೂ ಬೇಡ ಎಂದರು. ಕೊಪ್ಪಳದ ಗವಿಮಠವನ್ನು ಹಾಗೂ ನನ್ನನ್ನು ಇನ್ನೊಂದು ಮಠದ ಜೊತೆಗೆ ಮತ್ತೊಬ್ಬ ಸ್ವಾಮೀಜಿ ಜೊತೆ ಹೋಲಿಕೆ ಮಾಡಬೇಡಿ. ನಾನು ಎಲ್ಲ ಮಠಗಳ ಸ್ವಾಮೀಜಿಗಳ ಪಾದದ ದೂಳು ಎಂದು ತಮ್ಮ ಮನದ ಎರಡನೇ ಮಾತು ಹೇಳಿದರು. ನನಗೆ ಪ್ರಶಸ್ತಿ ಕೊಡಬೇಕು ಎಂದು ಯಾರೂ ಶಿಫಾರಸು ಮಾಡಬೇಡಿ. ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಬೇಡಿ. ಬಂದ ಪ್ರಶಸ್ತಿತಿರಸ್ಕರಿಸುವಷ್ಟು ದೊಡ್ಡವನು ನಾನಲ್ಲ ತೆಗೆದುಕೊಳ್ಳುವ ಅರ್ಹತೆ ನನಗಿಲ್ಲ ಎಂದುಕೊಂಡಿದ್ದೇನೆ ಎಂದು ಕಣ್ಣೀರು ಹಾಕಿದರು.
ಪೂಜೆ, ಓದು ಹಾಗೂ ಜನರ ಸೇವೆ ಮಾತ್ರ ನನ್ನ ಆದ್ಯತೆ. ಜಾತಿಗಳ ಯಾವ ಜಗಳದಲ್ಲಿಯೂ ನನ್ನನ್ನು ಎಳೆದುಕೊಂಡು ತರಬೇಡಿ ಎಂದು ಮನವಿ ಮಾಡಿದರು. ಎಲ್ಲರನ್ನೂ ಪ್ರೀತಿಸು ಎಲ್ಲರ ಸೇವೆ ಮಾಡು ಎನ್ನುವ ತತ್ವಕ್ಕೆ ಅಂಟಿಕೊಂಡಿದ್ದೇನೆ. ಜೀವ ಇರುವಷ್ಟು ದಿನ ಜನರ ಸೇವೆ ಮಾಡಿಕೊಂಡು ಇರುತ್ತೇನೆ. ವಿವಾದದ ಯಾವ ವಿಷಯದಲ್ಲಿಯೂ ಎಳೆದು ತರಬೇಡಿ ಎಂದು ಭಾವುಕರಾದರು. ಇತ್ತೀಚೆಗೆ ಮಠಕ್ಕೆ ಬಂದಿದ್ದ ಭಕ್ತರೊಬ್ಬರು ಸ್ವಾಮೀಜಿ ಮಠದಲ್ಲಿ ಎಲ್ಲಿಯೂ ನಿಮ್ಮ ಪೋಟೊವೇ ಇಲ್ಲವಲ್ಲ ಎಂದು ಪ್ರಶ್ನಿಸಿದ್ದಕ್ಕೆ ‘ಮಠದಲ್ಲಿ ನನ್ನ ಗುರುಗಳ ಪೋಟೊ ಇವೆ. ಅವರೇ ಮಾಲೀಕ ನಾನುಮಠದ ಸೇವಕ’ ಎಂದು ಉತ್ತರ ಕೊಟ್ಟಿದ್ದೇನೆ ಇಷ್ಟು ಬಿಟ್ಟು ಬೇರೆ ಯಾವ ವಿಷಯಗಳ ಬಗ್ಗೆ ಆಸಕ್ತಿ ಇಲ್ಲ ಎಂದರು.
