ಉದಯವಾಹಿನಿ, ಬೆಂಗಳೂರು: ಮಾದಕ ವಸ್ತುಗಳನ್ನು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಗುಂಪಿನ ವಿಡಿಯೊ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರಿಗೆ ದೂರು ಸಲ್ಲಿಸಿದ್ದ ವಕೀಲ ಹುಸೇನ್ ಉವೈಸ್‌ಗೆ ದುಷ್ಕರ್ಮಿಗಳು ಜೀವಬೆದರಿಕೆವೊಡ್ಡಿದ್ದು ಈ ಸಂಬಂಧ ಇಲ್ಲಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜ.೧೦ರಂದು ಇಲ್ಲಿನ ಶಿವಾಜಿನಗರದ ಸುಲ್ತಾನ್ ಶಾ ಮಸೀದಿ ಬಳಿ ಐದಾರು ಯುವಕರ ಗುಂಪು ಮಾದಕ ವಸ್ತುಗಳನ್ನು ಸೇವಿಸಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದರು ಎಂದು ಉಲ್ಲೇಖಿಸಿ ವಕೀಲ ಹುಸೇನ್ ಉವೈಸ್ ಅವರು ವಿಡಿಯೊಂದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಆನಂತರ, ಸ್ಥಳೀಯ ಪೊಲೀಸರು ಈ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ಇರಿಸಿ ಗುಂಪು ಸೇರಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸದಂತೆ ಅಲ್ಲಿನ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದಾದ ಬಳಿಕ ಕೆಲವರು ವಕೀಲ ಹುಸೇನ್ ಉವೈಸ್‌ನನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತಮ್ಮನ್ನು ಡ್ರಗ್ಸ್ ಪೆಡ್ಲರ್ ಎಂದು ಪರಿಚಯ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ.
