ಉದಯವಾಹಿನಿ, ಮಂಗಳೂರು: ತಣ್ಣೀರುಬಾವಿಯ ಕಡಲ ತೀರದ ಆಗಸ ಎಂದಿನಂತಿರಲಿಲ್ಲ. ಬಣ್ಣ ಬಣ್ಣದ, ನಾನಾ ಆಕಾರಗಳ ಗಾಳಿಪಟಗಳು ಇಲ್ಲಿನ ಬಾನಂಗಳದಲ್ಲಿ ರಂಗಿನ ಚಿತ್ತಾರ ಬಿಡಿಸಿದವು. ಪಡುವಣದಿಂದ ಬೀಸಿ ಬಂದ ತಂಗಾಳಿಯ ಅಲೆಯಲ್ಲಿ ತೇಲುತ್ತಾ ರಂಜಿಸಿದ ಈ ಗಾಳಿಪಟಗಳು ಶನಿವಾರ ಮುಸ್ಸಂಜೆ ನೋಡುಗರಿಗೆ ವರ್ಣನಾತೀತ ಅನುಭವ ಕಟ್ಟಿಕೊಟ್ಟವು.
ಕರಾವಳಿ ಉತ್ಸವದ ಅಂಗವಾಗಿ ಏರ್ಪಡಿಸಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಇಲ್ಲಿನವರಿಗೂ ದೇಶವಿದೇಶಗಳ ಗಾಳಿಪಟಗಳ ವೈವಿಧ್ಯವನ್ನು ಕಣ್ಣುಂಬಿಕೊಳ್ಳುವ ಅವಕಾಶ ಕಲ್ಪಿಸಿತು. ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡವು ಒಎನ್ ಜಿಸಿ ಎಂಆರ್‌ಪಿಎಲ್ ಸಹಕಾರದಲ್ಲಿ ಏರ್ಪಡಿಸಿರುವ ಈ ಉತ್ಸವದಲ್ಲಿ ಈ ಸಲ ಇಂಗ್ಲೆಂಡ್, ಜರ್ಮನಿ, ನೆದರ್ಲೆಂಡ್, ಇಟಲಿ, ಸ್ಪೀಡನ್ ಸೇರಿದಂತೆ 10 ದೇಶಗಳ 22 ಗಾಳಿಪಟ ತಂಡಗಳು ಹಾಗೂ ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮತ್ತಿತರ ರಾಜ್ಯಗಳ 30 ತಂಡಗಳು ಪಾಲ್ಗೊಂಡವು. ಜೊತೆಗೆ ಸ್ಥಳೀಯರೂ ಗಾಳಿಪಟಗಳೂ ಹಾರಿಸಿ ಸಂಭ್ರಮಿಸಿದರು.
