ಉದಯವಾಹಿನಿ, ಚಿಕ್ಕಮಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ನಮ್ಮ ಹೋರಾಟ ಭಾರತದ ವಿರುದ್ಧ’ ಎಂಬ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ನಗರದ ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಮಾತನಾಡಿ, ‘ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ವಿರುದ್ಧ ಆಟಲ್ ಬಿಹಾರಿ ವಾಜಪೇಯಿ ವಿದೇಶದಲ್ಲಿ ಎಂದಿಗೂ ಟೀಕಿಸಿರಲಿಲ್ಲ, ಆದರೆ, ಇಂದಿರಾ ಮೊಮ್ಮಗ ಇಂದು ವಿದೇಶಗಳಲ್ಲಿ ಭಾರತದ ಬಗ್ಗೆ ಸುಳ್ಳು ಹೇಳಿಕೊಂಡು ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.ದೇಶದ ಜನತೆಗೆ ಗೌರವ ತರಲು ಭಾರತವನ್ನು ವಿಶ್ವಗುರು ಮಾಡಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿ ಬೇಜವಾಬ್ದಾರಿ ಹೇಳಿಕೆ ನೀಡಿ ದೇಶ ಒಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ‘ಕಾಂಗ್ರೆಸ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾರತ ದೇಶ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ನಮ್ಮ ಹೋರಾಟ ಎಂದು ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ನೈತಿಕವಾಗಿ ನಕ್ಸಲರು, ಉಗ್ರಗ್ರಾಮಿಗಳ ನೆರಳಿನಲ್ಲಿ ನಿಂತಿದ್ದಾರೆ. ಇದು ಭವಿಷ್ಯದಲ್ಲಿ ದೇಶಕ್ಕೆ ಆಘಾತಕಾರಿ ಬೆಳವಣಿಗೆ’ ಎಂದು ಹೇಳಿದರು.
