ಉದಯವಾಹಿನಿ: ಬೆಳಗಾವಿ: ಆರಂಭದಿಂದಲೂ ನಾನು ರಾಜಕೀಯದಲ್ಲಿ ದಮು ತಡೆದುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನೂ ಸರಿಸಮನಾಗಿ ಕಾಣುವುದು ನನ್ನ ಧರ್ಮ. ಆ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ ಎಂದರು.ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ನನಗೆ ಪಕ್ಷ ಮುಖ್ಯ. ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ನಿಷ್ಠೆಯಿಂದ ಪಾಲಿಸುತ್ತೇನೆ ಎಂದು ಹೇಳಿದರು.
ಅನೇಕ ಸಂದರ್ಭಗಳಲ್ಲಿ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮಿಶ್ರ ಸರ್ಕಾರದಲ್ಲಿ ಈ ಮೊದಲು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ದಮು ತಡೆದುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ಯಾರದೋ ಮಾತು ಕೇಳಿ ನನ್ನ ಹೆಸರನ್ನು ಭಿನ್ನಮತ ಎಂದು ಬಳಕೆ ಮಾಡಬೇಡಿ. ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯಗಳಿಲ್ಲ. ನಾನು ತ್ಯಾಗ ಮಾಡಿಕೊಂಡೇ ಬರುತ್ತೇನೆ. ಜನರಿಗೆ ಒಳ್ಳೆಯದಾದರೆ ಸಾಕು ಎಂದರು. ನಾನುಂಟು, ನನ್ನ ಹೈಕಮಾಂಡ್ ಉಂಟು. ಕಾರ್ಯಕರ್ತರ ರಕ್ಷಣೆ, ಸರ್ಕಾರವನ್ನು ಭದ್ರಗೊಳಿಸುವುದು, ಪಕ್ಷ ಉಳಿಸುವುದು… ಇದು ನನ್ನ ಕರ್ತವ್ಯ. ಯಾವುದಕ್ಕೂ ನನ್ನ ಹೆಸರನ್ನು ಬಳಕೆ ಮಾಡಬೇಡಿ ಎಂದು ತಿಳಿಸಿದರು.
